ಕಳೆದ ವಾರ ಲಖ್ನೌ ನಗರದ ಲುಲು ಮಾಲ್ ಆವರಣದಲ್ಲಿ ನಮಾಜ್ ಹಾಗೂ ಪೂಜೆ ಮಾಡಿದ ಆರೋಪದ ಮೇಲೆ ಅಲ್ಲಿನ ಪೊಲೀಸರು ಬಂಧಿಸಿದ್ದ ನಾಲ್ವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ವಾರ ಮಾಲ್ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು. ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ಒಪ್ಪಿಸಿದ ಲಕ್ನೋ ಪೊಲೀಸರು ಇದೀಗ ಉಳಿದ ನಾಲ್ವರ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಜುಲೈ 12 ರಂದು ಲುಲು ಮಾಲ್‌ನಲ್ಲಿ ನಮಾಜ್ ಮಾಡುತ್ತಿದ್ದ 8 ಮಂದಿ ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಇವರ್ಯಾರೂ ಮುಸಲ್ಮಾನರೇ ಅಲ್ಲ ಎಂಬ ವದಂತಿ ಕೂಡ ಹಬ್ಬಿತ್ತು. ಆದ್ರೆ ಆ ವರದಿಗಳನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಬಂಧಿತರಲ್ಲಿ ಸರೋಹ್ ನಾಥ್ ಯೋಗಿ, ಕೃಷ್ಣ ಕುಮಾರ್ ಪಾಠಕ್ ಮತ್ತು ಗೌರವ್ ಗೋಸ್ವಾಮಿ ಮಾಲ್‌ನಲ್ಲೇ ಪೂಜೆ ಮಾಡಲು ಯತ್ನಿಸಿದ್ದರು. ಅವರನ್ನು ಜುಲೈ 15 ರಂದು ಬಂಧಿಸಲಾಗಿದೆ.
ಇನ್ನೊಬ್ಬ ಆರೋಪಿ, ಮುಸ್ಲಿಂ ವ್ಯಕ್ತಿ ಅರ್ಷದ್ ಅಲಿಯನ್ನು ನಮಾಜ್ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಬಂಧಿಸಲಾಗಿದೆ. ಬಂಧಿತರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿಲ್ಲ, ಬದಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.