ಇಂದೋರ್: ಲಿವಿಂಗ್ ಟುಗೆದರ್ ನಂತಹ ಸಂಬಂಧಗಳು ಲೈಂಗಿಕ ಅಪರಾಧಗಳಿಗೆ ಕಾರಣವಾಗುತ್ತವೆ ಹಾಗೂ ಅಶ್ಲೀಲತೆಯನ್ನು ಉತ್ತೇಜಿಸುತ್ತಿವೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 25 ವರ್ಷದ ಯುವಕನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಈ ವೇಳೆ ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್ ಅವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ಸಂಬಂಧಗಳಿಂದ ಉಂಟಾಗುವ ಇಂತಹ ಅಪರಾಧಗಳ ಉಲ್ಬಣವನ್ನು ಗಮನಿಸಿದರೆ, ಲಿವ್ ಇನ್ ರಿಲೇಶನ್ಶಿಪ್ ನ ನಿಷೇಧವನ್ನು ಮಾಡಬೇಕಾಗಬಹುದು. ಇದು ಕಾಮಪ್ರಚೋದಕ ನಡವಳಿಕೆಯನ್ನು ಉತ್ತೇಜಿಸುತ್ತದೆ ಮತ್ತು ಲೈಂಗಿಕ ಅಪರಾಧಗಳಿಗೆ ಮತ್ತಷ್ಟು ಕಾರಣವಾಗುತ್ತದೆ ಎಂದು ತಿಳಿಸಿದೆ.
ಆರ್ಟಿಕಲ್ 21ರಲ್ಲಿ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುತ್ತದೆ. ಲಿವ್-ಇನ್ ಸಂಬಂಧಗಳಿಂದ ಉಂಟಾಗುವ ಕಾನೂನು ವಿವಾದಗಳ ಹೆಚ್ಚಳವನ್ನು ಎತ್ತಿ ಹಿಡಿದ ಹೈಕೋರ್ಟ್, ಈ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಲು ಬಯಸುವವರು ಅದನ್ನು ತ್ವರಿತವಾಗಿ ಸ್ವೀಕರಿಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದೆ.
ವರದಿ ಪ್ರಕಾರ, ದೂರುದಾರ ಮಹಿಳೆ ಎರಡು ಬಾರಿ ಗರ್ಭಿಣಿಯಾಗಿದ್ದಳು. ಅರ್ಜಿದಾರರ (ಲಿವ್-ಇನ್ ಪಾಲುದಾರ) ಒತ್ತಡದಿಂದ ಭ್ರೂಣವನ್ನು ಗರ್ಭಪಾತ ಮಾಡಿದ್ದಾಳೆ ಎಂದು ಬಹಿರಂಗಪಡಿಸಿದೆ. ಇವರಿಬ್ಬರ ಸಂಬಂಧವು ಮುರಿದು ಬಿದ್ದಾಗ, ಮಹಿಳೆ ಬೇರೊಬ್ಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಅರ್ಜಿದಾರ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ ಮಹಿಳೆ ಹಾಗೂ ಆಕೆಯ ಇಡೀ ಕುಟುಂಬವನ್ನು ಹೊಣೆಗಾರನಾಗಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ. ಇದು ಮಹಿಳೆಯ ಮದುವೆಯನ್ನು ರದ್ದುಪಡಿಸಲು ಕಾರಣವಾಯಿತು.