ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಪರಿವರ್ತನೆಗೊಂಡ ಮಹಿಳೆಯೂ ಸಹ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಪ್ರಕರಣದ ವಿವರ: 2016ರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆಣ್ಣಾಗಿ ಪರಿವರ್ತನೆಯಾಗಿದ್ದ ಸಂತ್ರಸ್ತೆ ಅದೇ ವರ್ಷ ಮದುವೆಯಾಗಿದ್ದರು. ಆದರೆ ಎರಡು ವರ್ಷಗಳ ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯ ಬಂದು ಅವರುಗಳು ದೂರವಾಗಿದ್ದರು.
ಈ ಹಿನ್ನಲೆಯಲ್ಲಿ ಪರಿಹಾರ ಕೋರಿ ಸಂತ್ರಸ್ತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿದ್ದು, 12,000 ರೂಪಾಯಿ ಮಾಸಿಕ ಜೀವನಾಂಶ ಪಾವತಿಸುವಂತೆ ಪತಿಗೆ ಸೂಚಿಸಲಾಗಿತ್ತು.
ಇದನ್ನು ಪ್ರಶ್ನಿಸಿ ಪತಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿಯಲಾಗಿದೆ. ಪತ್ನಿಯಿಂದ ದೂರವಾಗಿರುವ ಪತಿ ಆಕೆಗೆ ಜೀವನಾಂಶ ನೀಡಬೇಕು ಎಂದು ಸೂಚಿಸಿದೆ.