ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಜಗದೀಶ್ ಶೆಟ್ಟರ್, ಕಿತ್ತೂರು ಕರ್ನಾಟಕದ ಲಕ್ಷ್ಮಣ ಸವದಿ ಸೇರಿದಂತೆ ಲಿಂಗಾಯತ ಸಮುದಾಯದ ಹಲವರು ಬಿಜೆಪಿ ತೊರೆದಿರುವ ಹಿನ್ನೆಲೆಯಲ್ಲಿ ಆ ಸಮುದಾಯದ ಮತಗಳು ಚದುರಿ ಹೋಗದಂತೆ ನೋಡಿಕೊಳ್ಳುವ ಸಲುವಾಗಿ ಬಿಜೆಪಿಯ ಲಿಂಗಾಯತ ನಾಯಕರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ಹೇಳಲಾಗಿದೆ.
ಬುಧವಾರದಂದು ಬೆಂಗಳೂರಿನ ಯಡಿಯೂರಪ್ಪನವರ ಕಾವೇರಿ ನಿವಾಸದಲ್ಲಿ ಬಿಜೆಪಿಯ ಲಿಂಗಾಯತ ನಾಯಕರ ಮಹತ್ವದ ಸಭೆ ನಡೆದಿದ್ದು, ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್, ಲಿಂಗಾಯತನೆಂಬ ಕಾರಣಕ್ಕಾಗಿ ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸಲಾಯಿತು ಎಂದು ನೀಡಿರುವ ಹೇಳಿಕೆಯಿಂದ ಉಂಟಾಗಬಹುದಾದ ಡ್ಯಾಮೇಜ್ ಕಂಟ್ರೋಲ್ ಗೆ ಸಮಾಲೋಚನೆ ನಡೆಸಲಾಗಿದೆ. ವೀರಶೈವ – ಲಿಂಗಾಯತ ಮತ್ತೆ ತಪ್ಪದಂತೆ ನೋಡಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆದಿದೆ.
ಅಂತಿಮವಾಗಿ ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಲಿಂಗಾಯತರೇ ಮುಖ್ಯಮಂತ್ರಿ ಎಂದು ಬಿಜೆಪಿ ಘೋಷಣೆ ಮಾಡಿದರೆ ತಪ್ಪು ಗ್ರಹಿಕೆ ಹೋಗಬಹುದು ಎಂದು ಅಭಿಪ್ರಾಯಪಡಲಾಗಿದೆ. ಈ ರೀತಿ ಮಾಡಿದರೆ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ್ ಮೊದಲಾದ ಲಿಂಗಾಯತ ನಾಯಕರು ಪಕ್ಷ ತೊರೆದಿರುವುದನ್ನೇ ಲಿಂಗಾಯತ ಮತ ಗಳಿಕೆಗಾಗಿ ಬಂಡವಾಳ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಬಹುದು ಎಂಬ ಅನಿಸಿಕೆ ವ್ಯಕ್ತವಾಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಯಡಿಯೂರಪ್ಪನವರಿಗೆ ಅಧಿಕಾರ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.