ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ಬರುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ಹಿನ್ನೀರು ಪ್ರದೇಶಕ್ಕೂ ತಟ್ಟಿದೆ. ಹೀಗಾಗಿ ಈ ಭಾಗದ ಹಲವು ಹಳ್ಳಿಗಳ ನಡುವಿನ ಸಂಪರ್ಕ ಸೇತುವೆಯಾಗಿರುವ ಲಾಂಚ್ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ನೀರು ಕಡಿಮೆಯಾಗಿರುವ ಕಾರಣ ಈಗಾಗಲೇ ಹಿನ್ನಿರು ಪ್ರದೇಶದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮುಪ್ಪಾನೆ ಲಾಂಚ್ ವಾರದ ಹಿಂದೆ ಸ್ಥಗಿತಗೊಂಡಿದ್ದು, ಹಸಿರುಮಕ್ಕಿ ಲಾಂಚ್ ಭಾನುವಾರದಿಂದ ಸ್ಥಗಿತಗೊಂಡಿದೆ. ಇದೀಗ ಸಿಗಂದೂರು ಸಂಚಾರ ಲಾಂಚ್ ಸೇವೆ ಸಹ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ವಾಹನಗಳ ಸಂಚಾರಕ್ಕಾಗಿ ಇರುವ ಸಿಮೆಂಟ್ ಪ್ಲಾಟ್ಫಾರ್ಮ್ ನಿಂದ ನೀರು ಕೆಳಗೆ ಇಳಿದಲ್ಲಿ ವಾಹನಗಳು ಲಾಂಚ್ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇನ್ನೂ 10 ದಿನ ಇದೆ ಪರಿಸ್ಥಿತಿ ಮುಂದುವರೆದರೆ ಸಿಗಂದೂರು ಲಾಂಚ್ ಸೇವೆ ಸ್ಥಗಿತವಾಗಲಿದೆ. ಮಳೆ ಬಂದು ನೀರಿನ ಏರಿಕೆಯಾದ ಬಳಿಕ ಎಂದಿನಂತೆ ಸೇವೆ ಶುರುವಾಗಬಹುದು.
ಸಿಗಂದೂರು ಚೌಡೇಶ್ವರಿಯ ದರ್ಶನಕ್ಕಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಲಾಂಚ್ ಸೇವೆಯೂ ಸಹ ಪ್ರಮುಖ ಆಕರ್ಷಣೆಯಾಗಿತ್ತು. ಒಂದೊಮ್ಮೆ ಸಿಗಂದೂರು ಲಾಂಚ್ ಸೇವೆ ಸ್ಥಗಿತಗೊಂಡರೆ ಸುತ್ತು ಹಾಕಿಕೊಂಡು ಸಿಗಂದೂರಿಗೆ ಹೋಗಬೇಕಾಗುತ್ತದೆ.