ಪಾಟ್ನಾ: ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿ ಅವರ ನಿವಾಸದಲ್ಲಿ ಶುಕ್ರವಾರ ನಡೆದ ಇಫ್ತಾರ್ ಕೂಟದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ರಾಜಕೀಯ ಪಕ್ಷದ ಗಣ್ಯರು ಭಾಗವಹಿಸಿದ್ದರು ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕಿ ಮಿಸಾ ಭಾರತಿ ಹೇಳಿದ್ದಾರೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಜೈಲಿನಿಂದ ಬಿಡುಗಡೆಯಾಗಿರುವುದನ್ನು ಕಂಡು ಎಲ್ಲರೂ ಸಂತೋಷಪಟ್ಟಿದ್ದಾರೆ. ಅವರ ಯೋಗಕ್ಷೇಮ ಮತ್ತು ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿದ್ದಾರೆ. ಈ ಸಂಬಂಧ ಯಾವುದೇ ರಾಜಕೀಯ ಹಿನ್ನೆಲೆ ಲೆಕ್ಕಿಸದೆ ನಿತೀಶ್ ಕುಮಾರ್ ಸೇರಿದಂತೆ ಪ್ರತಿಯೊಬ್ಬರನ್ನು ಇಫ್ತಾರ್ ಕೂಟಕ್ಕೆ ಆಹ್ವಾನಿಸಿದ್ದೇವು ಎಂದು ತಿಳಿಸಿದರು.
ಇಫ್ತಾರ್ ಕೂಟದ ಸಂದರ್ಭದಲ್ಲಿ, ಜನತಾ ದಳ (ಯುನೈಟೆಡ್) ನಾಯಕ ನಿತೀಶ್ ಕುಮಾರ್ ಅವರು ಲಾಲು ಪ್ರಸಾದ್ ಯಾದವ್ ಅವರ ಪುತ್ರರಾದ ತೇಜ್ ಪ್ರತಾಪ್ ಮತ್ತು ತೇಜಸ್ವಿ ಯಾದವ್ ಅವರೊಂದಿಗೆ ಕುಳಿತಿದ್ದರು. ಡೊರಾಂಡಾ ಖಜಾನೆ 139.35 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಸಂಬಂಧ ಜೈಲು ಪಾಲಾಗಿದ್ದ ಮೇವು ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್, ಲಾಲು ಪ್ರಸಾದ್ ಅವರಿಗೆ ಜಾಮೀನು ಮಂಜೂರು ಮಾಡಿದೆ.