ಸೈಬರ್ ಕಳ್ಳರ ಮೋಸದ ಜಾಲಕ್ಕೆ ಬಲಿಯಾದ ಪರಿಣಾಮ 43 ವರ್ಷದ ಮಹಿಳೆಯು ಬರೋಬ್ಬರಿ 3.86 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಎಸ್ಬಿಐ ಗ್ರಾಹಕ ಸೇವಾ ಸಿಬ್ಬಂದಿ ಎಂದು ಹೇಳಿಕೊಂಡ ಸೈಬರ್ ಕಳ್ಳರು ನಿಮಗೆ 25 ಲಕ್ಷ ರೂಪಾಯಿ ಲಾಟರಿ ಬಂದಿದೆ ಎಂದು ಯಾಮಾರಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಪ್ರಾಸೆಸಿಂಗ್ ಶುಲ್ಕ ಸೇರಿದಂತೆ ವಿವಿಧ ಕಾರಣ ನೀಡಿ 3.86 ಲಕ್ಷ ರೂಪಾಯಿ ಪೀಕಿದ್ದಾರೆ. ಈ ಸಂಬಂಧ ಮಹಿಳೆಯು ಎಫ್ಐಆರ್ ದಾಖಲಿಸಿದ್ದಾಳೆ. ಮುಂಬೈನ ವಡಾಲಾದಲ್ಲಿ ಈ ಘಟನೆ ಸಂಭವಿಸಿದೆ.
ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ತನ್ನ ನಾಲ್ವರು ಮಕ್ಕಳೊಂದಿಗೆ ವಡಾಲಾದಲ್ಲಿ ವಾಸವಿದ್ದಳು. ಎಸ್ಬಿಐ ಮ್ಯಾನೇಜರ್ ಆಕಾಶ್ ವರ್ಮಾ ಎಂಬ ಹೆಸರಿನಲ್ಲಿ ಕೆರೆ ಮಾಡಿದ ಸೈಬರ್ ವಂಚಕರು ನೀವು 25 ಲಕ್ಷ ರೂಪಾಯಿ ಲಾಟರಿ ಹೊಡೆದಿದ್ದೀರಾ ಎಂದು ನಂಬಿಸಿದ್ದರು.
ಈ ಲಾಟರಿಯನ್ನು ಪಡೆದುಕೊಳ್ಳಲು ನೀವು ಆರಂಭಿಕ ಶುಲ್ಕವನ್ನು ಪಾವತಿ ಮಾಡಬೇಕು ಎಂದು ಹೇಳಿದ್ದಾರೆ. ಇದಾದ ಬಳಿಕ ಒಂದೊಂದೆ ನೆಪವೊಡ್ಡಿ ಹಣ ಪೀಕಲು ಆರಂಭಿಸಿದ್ದಾರೆ. ತನಗೆ ವಂಚನೆ ಆಗಿದೆ ಎಂದು ತಿಳಿಯುತ್ತಿದ್ದಂತೆಯೇ ಮಹಿಳೆ ನನಗೆ ಲಾಟರಿ ಹಣ ಬೇಡ ಬದಲಾಗಿ ತಾನು ಈವರೆಗೆ ನೀಡಿದ ಎಲ್ಲಾ ಹಣವನ್ನು ವಾಪಾಸ್ ನೀಡಿ ಎಂದು ಕೇಳಿದ್ದಾಳೆ. ಈ ಹಣ ವಾಪಾಸ್ ಬೇಕು ಅಂದರೆ ಮತ್ತಷ್ಟು ಹಣ ನೀಡಬೇಕು ಎಂದು ವಂಚಕರು ಬೇಡಿಕೆ ಇಟ್ಟಿದ್ದಾರೆ. ಒಟ್ಟು 14 ಟ್ರಾನ್ಸಾಕ್ಷನ್ ಮೂಲಕ ಮಹಿಳೆ 3.86 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.