ಓಟ್ಸ್ ನಲ್ಲಿ ನಾರಿನಾಂಶ ಹೆಚ್ಚಿರುತ್ತದೆ. ಹಾಗೇ ಹೆಸರುಬೇಳೆಯಲ್ಲಿ ಪ್ರೋಟಿನ್ ಹೇರಳವಾಗಿರುತ್ತದೆ. ಇವೆರಡನ್ನು ಸೇರಿಸಿ ಟಿಕ್ಕಿ ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು ಸಂಜೆಯ ಸ್ನ್ಯಾಕ್ಸ್ ಗೂ ಚೆನ್ನಾಗಿರುತ್ತದೆ. ಮಾಡುವ ವಿಧಾನ ಹೀಗಿದೆ.
ಬೇಕಾಗುವ ಸಾಮಾಗ್ರಿಗಳು:
½ ಕಪ್ ಹೆಸರುಬೇಳೆ, ½ ಕಪ್ – ಓಟ್ಸ್, 2 ಟೇಬಲ್ ಸ್ಪೂನ್ – ಮೊಸರು, 3 ಟೇಬಲ್ ಸ್ಪೂನ್ – ಸಣ್ಣಗೆ ಹಚ್ಚಿದ ಈರುಳ್ಳಿ, ½ ಟೀ ಸ್ಪೂನ್ – ಸಣ್ಣಗೆ ಹಚ್ಚಿಟ್ಟುಕೊಂಡ ಹಸಿಮೆಣಸು, 2 ಟೀ ಸ್ಪೂನ್ ಚಾಟ್ ಮಸಾಲ, 2 ಟೀ ಸ್ಪೂನ್ – ಖಾರದಪುಡಿ, ¼ ಟೀ ಸ್ಪೂನ್ – ಗರಂ ಮಸಾಲ, ¼ ಟೀ ಸ್ಪೂನ್ – ಅರಿಶಿನ ಪುಡಿ, 1 ಟೀ ಸ್ಪೂನ್ – ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಟೇಬಲ್ ಸ್ಪೂನ್ – ಕೊತ್ತಂಬರಿ ಸೊಪ್ಪು ಸಣ್ಣಗೆ ಹಚ್ಚಿದ್ದು, ಉಪ್ಪು – ರುಚಿಗೆ ತಕ್ಕಷ್ಟು, 2 ಟೀ ಸ್ಪೂನ್ – ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು 1 ಕಪ್ ನೀರು ಸೇರಿಸಿ ಬೇಯಿಸಿಕೊಳ್ಳಿ. ನಂತರ ಇದನ್ನು ಬಸಿದುಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಬೌಲ್ ಗೆ ಹಾಕಿ ಉಳಿದ ಸಾಮಾಗ್ರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಇದರಿಂದ ಚಿಕ್ಕ ಚಿಕ್ಕ ಟಿಕ್ಕಿ ಮಾಡಿಕೊಂಡು ಒಂದು ನಾನ್ ಸ್ಟಿಕ್ ತವಾಕ್ಕೆ ಎಣ್ಣೆ ಸವರಿ ಟಿಕ್ಕಿಯನ್ನು ಅದರ ಮೇಲೆ ಇಟ್ಟು ಗ್ಯಾಸ್ ನಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ಎರಡೂ ಕಡೆ ಚೆನ್ನಾಗಿ ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ ಬಿಸಿ ಇರುವಾಗಲೇ ಸವಿಯಿರಿ.