“ಲಸಿಕೆ ತೆಗೆದುಕೊಳ್ಳಬೇಕಿತ್ತು” ಎಂಬುದು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಕೊನೆ ಸಂದೇಶ. ಅಮೇರಿಕಾದ ಲಾಸ್ ಏಂಜಲೀಸ್‌ನಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ಸಾಯುವ ಮೊದಲು ವ್ಯಾಕ್ಸಿನೇಷನ್ ತೆಗೆದುಕೊಳ್ಳದ ಬಗ್ಗೆ ತಮ್ಮ ಕುಟುಂಬ ಸದಸ್ಯರಿಗೆ ವಿಷಾದದ ಸಂದೇಶ ಕಳುಹಿಸಿ ಕೊನೆಯುಸಿರೆಳೆದಿದ್ದಾರೆ.
ಮೂರು ವರ್ಷದ ಮುದ್ದಾದ ಮಗುವಿನ ತಂದೆ, 40 ವರ್ಷದ ಕ್ರಿಶ್ಚಿಯನ್ ಕ್ಯಾಬ್ರೆರಾ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಕ್ಯಾಬ್ರೆರ ಅವರು ಜೀವನದ ಕೊನೆ ಗಳಿಗೆಯಲ್ಲಿ ಲಸಿಕೆ ಹಾಕಿಸಿಕೊಂಡಿಲ್ಲ ಎಂದು ಪಶ್ಚಾತ್ತಾಪ ಪಡುತ್ತಿದ್ದರು. ಆದರೆ ಸಮಯ ಮೀರಿ ಹೋಗಿತ್ತು. ವೈದ್ಯರ ಕೈಯಲ್ಲಿ ಏನೂ ಉಳಿದಿರಲಿಲ್ಲ. ಕ್ರಿಶ್ಚಿಯನ್ ಕಳೆದ ವಾರ ನಿಧನರಾದರು. ಅದಕ್ಕೂ ಒಂದು ವಾರದ ಮುಂಚೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು.
ಕ್ರಿಶ್ಚಿಯನ್ ಅವರ ಸಹೋದರ ಗಿನೋ, ಫಾಕ್ಸ್ 11 ಗೆ ಈ ಘಟನೆಯನ್ನು ವರದಿ ಮಾಡಿದ್ದಾರೆ. ಮೃತ ಕ್ರಿಶ್ಚಿಯನ್ ಕೊರೋನಾ ಲಸಿಕೆಯನ್ನು ಸ್ವೀಕರಿಸಲಿಲ್ಲ. ಅವರು ಯಾವಾಗಲೂ ನನಗೆ ಯಾವ ಖಾಯಿಲೆ ಬರುತ್ತೆ ಎಂದು ಮಾತನಾಡುತ್ತಿದ್ದರು. ಅವರಿಗೆ ವಿಜ್ಞಾನದಲ್ಲಿ ನಂಬಿಕೆ ಇರಲಿಲ್ಲ ಎಂದು ಗಿನೋ ಹೇಳಿದ್ದಾರೆ.
ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ, ನಾನು ಲಸಿಕೆ ತೆಗೆದುಕೊಳ್ಳದಿರುವುದೆ ತಪ್ಪಾಯಿತು. ವ್ಯಾಕ್ಸಿನ್ ತೆಗೆದುಕೊಂಡಿದ್ದರೆ ಇವತ್ತು ನನ್ನ ಪ್ರಾಣ ಉಳಿಯುತ್ತಿತ್ತೇನೊ ಎಂದು ಕ್ರಿಶ್ಚಿಯನ್ ಸಾಯುವ ಒಂದು ರಾತ್ರಿಯ ಮೊದಲು, ಪಶ್ಚಾತ್ತಾಪದ ಸಂದೇಶವನ್ನು ಕಳುಹಿಸಿದ್ದರು ಎಂದು ಗಿನೋ ಭಾವುಕರಾಗಿದ್ದಾರೆ.
ಶೆರ್ಮನ್ ಓಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕ್ರಿಶ್ಚಿಯನ್ ಜನವರಿ 22 ರಂದು ನಿಧನರಾಗಿದ್ದಾರೆ. ಕ್ರಿಸ್ಮಸ್ ಸಮಯದಲ್ಲಿ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ಅವರು ಎರಡೂ ಶ್ವಾಸಕೋಶಗಳಲ್ಲಿ ನ್ಯುಮೋನಿಯಾ ತೊಂದರೆ ಕಾಣಿಸಿಕೊಂಡಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊನೆಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.