ಬೆಂಗಳೂರು: ದೇಶದಲ್ಲಿ ಲಫಂಗರು, ಗೂಂಡಾಗಳು, ಒಂದೇ ಪಕ್ಷವನ್ನು ಸೇರುತ್ತಿದ್ದಾರೆ. ಅದು ಯಾವುದೆಂದು ನಿಮಗೆಲ್ಲ ಗೊತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರೋಕ್ಷವಾಗಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ರೈತರ ಬೃಹತ್ ಸಮಾವೇಶದಲ್ಲಿ ಆಡಳಿತರೂಢ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿದ ಅವರು, ಭಾರತೀಯ ಜನತಾ ಪಕ್ಷ ದೇಶದ ಎಲ್ಲೆಡೆ ದಂಗೆ, ಹಿಂಸಾಚಾರಗಳನ್ನು ಮಾಡಿಸುತ್ತಿದೆ. ಗೂಂಡಾಗಳ ಸರ್ಕಾರ ನಿಮಗೆ ಬೇಕೆ ಎಂದು ಪ್ರಶ್ನಿಸಿದರು. ಗೂಂಡಾಗಳಿಗೆ ಬಿಜೆಪಿಯಲ್ಲಿ ಗೌರವ, ಸ್ಥಾನಮಾನ ದೊರೆಯುತ್ತದೆ ಎಂದು ಆರೋಪಿಸಿದರು.
ನಿಮಗೆ ಗೂಂಡಾಗಳ, ಲಫಂಗರ ಸರ್ಕಾರ ಬೇಕೆ ಅಥವಾ ಪ್ರಾಮಾಣಿಕ ಆಡಳಿತ ನೀಡುವ ಸರ್ಕಾರ ಬೇಕೆ ? 40% ಸರ್ಕಾರವನ್ನು ಧಿಕ್ಕರಿಸಿ, ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಿ ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ 20% ಕಮಿಷನ್ ಸರ್ಕಾರ ಎಂದು ಹೆಸರಾಗಿತ್ತು. ಈಗಿನ ಬಿಜೆಪಿ ಸರ್ಕಾರ 40% ಸರ್ಕಾರ ಎಂದು ಹೆಸರಾಗಿದೆ. ಇವರನ್ನೆಲ್ಲ ಈಗ ಮನೆಗೆ ಕಳುಹಿಸುವ ಕಾಲ ಹತ್ತಿರವಾಗಿದೆ. ದೆಹಲಿ, ಪಂಜಾಬ್ ನಲ್ಲಿ ಆಗಿದ್ದನ್ನು ಕರ್ನಾಟಕದಲ್ಲೂ ಮಾಡೋಣ. ಇಲ್ಲಿನ ರಾಜಕಾರಣವನ್ನು ಬದಲಿಸೋಣ ಎಂದು ಕೇಜ್ರಿವಾಲ್ ಕರೆ ನೀಡಿದರು.
ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಸೇರಿದಂತೆ ರೈತ ಸಂಘ ಮತ್ತು ಎಎಪಿಯ ರಾಜ್ಯ ಮುಖಂಡರು ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ರೈತರು ಈ ಸಮಾವೇಶದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.