ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಸ್ಮರಣಾರ್ಥ ಕೇಂದ್ರ ಸರ್ಕಾರವು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ವಿಚಾರವಾಗಿ ಮಾತನಾಡಿದ ಕೇಂದ್ರ ರೈಲ್ವೆ, ಸಂವಹನ ಹಾಗೂ ಎಲೆಕ್ಟ್ರಾನಿಕ್ಸ್ , ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಇದು ಭಾರತದ ಗಾನ ಕೋಗಿಲೆಗೆ ಸೂಕ್ತವಾದ ಗೌರವವಾಗಿದೆ ಎಂದು ಹೇಳಿದ್ದಾರೆ.
ಈ ಅಂಚೆಚೀಟಿಯನ್ನು ಸ್ಮರಣಾರ್ಥ ಅಂಚೆಚೀಟಿ ವಿಭಾಗದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಂಚೆ ಇಲಾಖೆಯ ನೀಡಿರುವ ಮಾಹಿತಿಯ ಪ್ರಕಾರ, ಪ್ರಮುಖ ಘಟನೆಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖ ವ್ಯಕ್ತಿಗಳು, ಪ್ರಕೃತಿಯ ಅಂಶಗಳು, ಸುಂದರ ಅಥವಾ ಅಪರೂಪದ ಪ್ರಾಣಿಗಳು, ಸಸ್ಯಗಳು ಇತ್ಯಾದಿಗಳ ಸ್ಮರಣಾರ್ಥವಾಗಿ ಈ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಅಂಚೆಚೀಟಿಗಳ ಸಂಗ್ರಹದ ಠೇವಣಿ ಖಾತೆ ಯೋಜನೆಯ ಅಡಿಯಲ್ಲಿ ಇವುಗಳನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಮುದ್ರಿಸಲಾಗುತ್ತದೆ. ಸ್ಮರಣಾರ್ಥ ಅಂಚೆ ಚೀಟಿಗಳು ವಾರ್ಷಿಕ ಸಂಚಿಕೆ ಕಾರ್ಯಕ್ರಮದ 10 ಪ್ರತಿಶತವನ್ನು ಮೀರಿರಬಾರದು.
ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಭಾನುವಾರದಂದು ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು. ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ಅವರನ್ನು ಜನವರಿ 8ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ನಿನ್ನೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.