ಲೇಹ್: ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ ವಾರ್ಷಿಕ ಹಬ್ಬವಾದ ಸ್ಪಿಟುಕ್ ಗಸ್ಟರ್ ಗೆ ಭಾನುವಾರ ಅಧಿಕೃತ ಚಾಲನೆ ದೊರಕಿದೆ.
ಲಡಾಖಿ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಪರಂಪರೆಯ ವಾರ್ಷಿಕ ಆಚರಣೆಯ ಅಂಗವಾಗಿ ವರ್ಣರಂಜಿತ ಮಾಸ್ಕ್ ಡ್ಯಾನ್ಸ್ ಅನ್ನು ವೀಕ್ಷಿಸಲು ಸ್ಪಿಟುಕ್ ಮಠದಲ್ಲಿ ಸಾವಿರಾರು ಜನರು ನೆರೆದಿದ್ದರು. ಸ್ಪಿಟುಕ್ ಮಠವು ಲೇಹ್ ನಿಂದ 8 ಕಿಲೋಮೀಟರ್ ದೂರದಲ್ಲಿದೆ.
ಈ ಉತ್ಸವದ ಪ್ರಮುಖ ಆಕರ್ಷಣೆಯೆಂದರೆ ಸ್ಥಳೀಯವಾಗಿ ಚಾಮ್ಸ್ ಎಂದು ಕರೆಯಲ್ಪಡುವ ವರ್ಣರಂಜಿತ ಮಾಸ್ಕ್ ಡ್ಯಾನ್ಸ್ ಮಹಾಕಾಳ (ಗೊಂಬೋ), ಪಲ್ಡಾನ್ ಲಾಮೊ (ಶ್ರೀದೇವಿ), ಬಿಳಿ ಮಹಾಕಾಳ, ರಕ್ಷಕ ದೇವತೆಗಳ ವೇಷವನ್ನು ಧರಿಸುತ್ತಾರೆ. ಮಾಸ್ಕ್ ಡ್ಯಾನ್ಸ್ ಸೆರ್ಸ್ಕಮ್‌ನೊಂದಿಗೆ ಉತ್ಸವ ಪ್ರಾರಂಭವಾಯಿತು.
ಮಹಾಯಾನ ಬೌದ್ಧಧರ್ಮದ ಗೆಲುಕ್ಸ್‌ಪಾ ಪಂಥದ ಸಂಸ್ಥಾಪಕ ಜೆ ತ್ಸೊಂಗ್‌ಖಾಪಾ ಅವರ ದೊಡ್ಡ ತಂಗ್ಕಾ (ಚಿತ್ರಕಲೆ) ಹಬ್ಬದ ಸಂದರ್ಭದಲ್ಲಿ ಅಂಗಳದಲ್ಲಿ ಪ್ರದರ್ಶಿಸಲಾಯಿತು. ಇನ್ನು ಈ ವೇಳೆ ಮಾತನಾಡಿದ ಸ್ಪಿಟುಕ್ ಮಠದ ಚೋಕ್ಜಿ ಲಾಮಾ, ಪೂಜ್ಯ ಲೋಬ್ಜಾಂಗ್ ಲುಂಡಪ್, ಎರಡು ದಿನಗಳ ಉತ್ಸವವು ಸಮಾಜದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಾಮರಸ್ಯವನ್ನು ತರುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಹಬ್ಬದ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ಅವರು ಪ್ರಾರ್ಥಿಸಿದ್ದಾರೆ.
ಸನ್ಯಾಸಿಗಳು ಮುಂಚಿತವಾಗಿ ಮಾಸ್ಕ್ ಡ್ಯಾನ್ಸ್ ಅನ್ನು ಅಭ್ಯಾಸ ಮಾಡುವ ಮೂಲಕ ಹಬ್ಬಕ್ಕೆ ಉತ್ತಮ ಸಿದ್ಧತೆಯನ್ನು ಮಾಡುತ್ತಾರೆ. ಹಬ್ಬವು ಪ್ರಾರಂಭವಾಗುವ ಏಳು ದಿನಗಳ ಮೊದಲು ಪ್ರಾರ್ಥನೆ ಶುರುವಾಗುತ್ತದೆ. ಈ ಹಬ್ಬದ ನಂತರ ಕಠಿಣ ಚಳಿಗಾಲದ ಹವಾಮಾನವು ಬೆಚ್ಚಗಿರುತ್ತದೆ ಮತ್ತು ಆಹ್ಲಾದಕರವಾಗಿರುತ್ತದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ.