
ಇದೀಗ ಇಂಥದ್ದೇ ವಿಡಿಯೋ ಲಡಾಖ್ನಲ್ಲಿ ಕಾಣಿಸಿಕೊಂಡಿದೆ. ಮೂವರು ಪ್ರವಾಸಿಗರು ತಮ್ಮ ಕಾರನ್ನು ಪ್ರಾಚೀನ ಪ್ಯಾಂಗಾಂಗ್ ಸರೋವರದಲ್ಲಿ ಓಡಿಸಿದ್ದಾರೆ. ಜಿಗ್ಮತ್ ಲಡಾಖಿ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವ್ಯಕ್ತಿಯೊಬ್ಬರು ಸರೋವರದಲ್ಲಿ ಎಸ್ಯುವಿ ಚಾಲನೆ ಮಾಡುತ್ತಿದ್ದರೆ, ಮತ್ತಿಬ್ಬರು ವ್ಯಕ್ತಿಗಳು ರೂಫ್ನಲ್ಲಿ ನಿಂತಿದ್ದಾರೆ. ಅಷ್ಟೇ ಅಲ್ಲ, ಸರೋವರದಲ್ಲಿ ಕುರ್ಚಿ ಮತ್ತು ಟೇಬಲ್ ಗಳನ್ನು ಸಹ ಇಡಲಾಗಿದೆ. ಅದರಲ್ಲಿ ಹಲವಾರು ಮದ್ಯದ ಬಾಟಲಿಗಳು, ನೀರು ಮತ್ತು ಚಿಪ್ಸ್ ಪ್ಯಾಕೆಟ್ಗಳನ್ನು ಹರಡಲಾಗಿದೆ.
ವಿಡಿಯೋ ಹಂಚಿಕೊಂಡ ಜಿಗ್ಮತ್ ಲಡಾಖಿ, ತಾನು ನಾಚಿಕೆಗೇಡಿನ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದೇನೆ. ಇಂತಹ ಬೇಜವಾಬ್ದಾರಿ ಪ್ರವಾಸಿಗರು ಲಡಾಖ್ ಅನ್ನು ಕೊಲ್ಲುತ್ತಿದ್ದಾರೆ. ನಿಮಗೆ ಗೊತ್ತೆ? ಲಡಾಖ್ 350ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಹೊಂದಿದೆ ಮತ್ತು ಪ್ಯಾಂಗೊಂಗ್ನಂತಹ ಸರೋವರಗಳು ಅನೇಕ ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ. ಇಂತಹ ಕೃತ್ಯವು ಅನೇಕ ಪಕ್ಷಿ ಪ್ರಭೇದಗಳ ಆವಾಸಸ್ಥಾನವನ್ನು ಅಪಾಯಕ್ಕೆ ತರುತ್ತದೆ ಎಂದು ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಕೆರಳಿಸಿದೆ. ಪ್ರವಾಸಿಗರ ಅಸಡ್ಡೆ ವರ್ತನೆಗೆ ನೆಟ್ಟಿಗರು ಛೀಮಾರಿ ಹಾಕಿದ್ದಾರೆ. ಪ್ರವಾಸಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.