ಬೆಳಗಾವಿ: ವಿಧಾನ ಪರಿಷತ್ ಚುನಾವಣಾ ಅಖಾಡ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಸಹೋದರ ಲಖನ್ ಜಾರಕಿಹೊಳಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಯಾಕೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಬೆಳಗಾವಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಹಲವರಿಗೆ ಲಖನ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಯಾಕೆ ಕಣಕ್ಕಿಳಿಸಿದೆ ಎಂಬ ಬಗ್ಗೆ ಗೊಂದಲ ಇರಬಹುದು. ಕಾಂಗ್ರೆಸ್ ಸೋಲಿಸಬೇಕು ಎಂಬ ಉದ್ದೇಶದಿಂದಲೇ ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ ಎಂದರು.
ಲಖನ್ ಸ್ಪರ್ಧೆ ಬಗ್ಗೆ ಮೂರು ತಿಂಗಳ ಹಿಂದೆಯೇ ನಾನು ವರಿಷ್ಠರ ಗಮನಕ್ಕೆ ತಂದಿದ್ದೆ. ವಿವೇಕ್ ರಾವ್ ಪಾಟೀಲ್ 6 ವರ್ಷ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ಆದರೂ ಕಾಂಗ್ರೆಸ್ ಅವರಿಗೆ ಮೋಸ ಮಾಡಿದೆ. ವಿವೇಕ್ ರಾವ್ ಪಾಟೀಲ್ ಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ, ಕಾಂಗ್ರೆಸ್ ಅವರಿಗೆ ಟಿಕೇಟ್ ಕೊಟ್ಟಿದ್ದರೆ ನಾನು ನನ್ನ ತಮ್ಮ ಲಖನ್ ನನ್ನು ಸ್ಪರ್ಧೆ ಮಾಡಿಸುತ್ತಿರಲಿಲ್ಲ. ವಿವೇಕ್ ಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೇ ನಾವು ಪಕ್ಷೇತರ ಅಭ್ಯರ್ಥಿ ಹಾಕಿದ್ದು. ಒಟ್ಟಾರೆ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಗೆಲ್ಲಬೇಕು. ಕಾಂಗ್ರೆಸ್ ಅಭ್ಯರ್ಥಿ ಸೋಲಬೇಕು ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.