ದುರ್ಗೆಯ ಮೂರು ಅವತಾರಗಳಲ್ಲಿ ದೇವತೆ ಲಕ್ಷ್ಮಿ ಕೂಡ ಒಬ್ಬಳು. ಲಕ್ಷ್ಮಿಯನ್ನು ಸಂಪತ್ತಿನ ಸಂಕೇತವೆಂದೇ ಪರಿಗಣಿಸಲಾಗುತ್ತದೆ. ಲಕ್ಷ್ಮಿಯನ್ನು ಭಕ್ತಿಯಿಂದ ಆರಾಧಿಸಿದರೆ ಶ್ರೀಮಂತಿಕೆ ಹಾಗೂ ಸುಖ-ಸಂತೋಷ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಆದ್ರೆ ಧಾರ್ಮಿಕ ಗ್ರಂಥಗಳ ಪ್ರಕಾರ ಕೆಲವೊಂದು ಹವ್ಯಾಸಗಳನ್ನು ರೂಢಿಸಿಕೊಂಡರೆ ಲಕ್ಷ್ಮಿದೇವಿ ನಿಮಗೆ ಒಲಿಯುವುದಿಲ್ಲ. ಅವುಗಳಿಂದ ಅದೃಷ್ಟ ಹಾಗೂ ಜೀವನದಲ್ಲಿನ ಏಳ್ಗೆ ಎರಡಕ್ಕೂ ತೊಡಕಾಗುತ್ತದೆ. ಹಾಗಾಗಿ ಈ 7 ಅಭ್ಯಾಸಗಳಿಂದ ದೂರವಿದ್ದು, ಲಕ್ಷ್ಮಿಯ ಕೃಪೆಗೆ ಪಾತ್ರರಾಗಿ.
ಅತಿಯಾದ ನಿದ್ರೆ : ಅತಿಯಾದ ನಿದ್ರೆ ಲಕ್ಷ್ಮಿಯನ್ನು ನಿಮ್ಮ ಮನೆಯಿಂದ ದೂರ ಮಾಡುತ್ತದೆ, ಬಡತನವನ್ನು ಆಹ್ವಾನಿಸುತ್ತದೆ. ಶಾಸ್ತ್ರದ ಪ್ರಕಾರ ಸೂರ್ಯೋದಯಕ್ಕಿಂತ ಮೊದಲು ಏಳಬೇಕು, ಮುಸ್ಸಂಜೆಯಲ್ಲಿ ನಿದ್ದೆ ಮಾಡಬಾರದು. ಬೇಗ ಮಲಗಿ ಬೇಗ ಎದ್ದರೆ ದಿನವಿಡೀ ಉಲ್ಲಾಸದಿಂದಿರಬಹುದು ಅಂತಾ ಆಯುರ್ವೇದದಲ್ಲೂ ಹೇಳಲಾಗಿದೆ.
ವಿಳಂಬ ಪ್ರವೃತ್ತಿ : ನಾಳೆ ಎಂದವನ ಮನೆ ಹಾಳು ಎಂಬ ಗಾದೆಯೇ ಇದೆ. ಯಾವುದರಲ್ಲೂ ವಿಳಂಬ ಪ್ರವೃತ್ತಿ ಒಳ್ಳೆಯದಲ್ಲ. ಸಂಪತ್ತು ನಿಮಗೆ ದೊರಕಬೇಕೆಂದರೆ ವಿಳಂಬ ಪ್ರವೃತ್ತಿಯನ್ನು ನಿಲ್ಲಿಸಿ.
ಪುರೋಹಿತರು ಮತ್ತು ಧಾರ್ಮಿಕ ಗ್ರಂಥಗಳಿಗೆ ಅಪಚಾರ : ಕೆಲವೊಮ್ಮೆ ನಾವು ಧಾರ್ಮಿಕ ಗ್ರಂಥಗಳನ್ನು ಗೇಲಿ ಮಾಡುತ್ತೇವೆ, ಅದೆಲ್ಲಾ ಹಳೆಯ ಪುರಾಣ ಅಂತಾ ಹೀಗಳೆಯುತ್ತೇವೆ. ಆದ್ರೆ ಅವುಗಳ ಹಿಂದಿನ ತರ್ಕ ನಮಗೆ ಗೊತ್ತಿರುವುದಿಲ್ಲ. ಯಾವುದೇ ಕಾರಣಕ್ಕೂ ಪುರೋಹಿತರು ಮತ್ತು ಧಾರ್ಮಿಕ ಗ್ರಂಥಗಳಿಗೆ ಅಪಚಾರ ಮಾಡಬೇಡಿ.
ಬ್ರಹ್ಮ ಮುಹೂರ್ತ ಸಮಯದಲ್ಲಿ ಪ್ರಾಪಂಚಿಕ ಸುಖಗಳಿಂದ ದೂರವಿರಿ : ಶಾಸ್ತ್ರದ ಪ್ರಕಾರ ಮುಂಜಾನೆ 2-4 ಗಂಟೆ ದೇವರ ಆರಾಧನೆಗೆ ಸೂಕ್ತವಾದ ಸಮಯ. ಆ ಸಮಯದಲ್ಲಿ ಪ್ರಾಪಂಚಿಕ ಸುಖಗಳನ್ನು ಅನುಭವಿಸಬೇಡಿ. ಹಾಗೆ ಮಾಡಿದಲ್ಲಿ ಸಂಪತ್ತು ನಿಮಗೆ ದೊರಕುವುದಿಲ್ಲ.
ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚದೇ ಇರುವುದು : ದೀಪ ಬೆಳಗುವುದು ಆತ್ಮ ಶುದ್ಧೀಕರಣದ ಸಂಕೇತ. ಜ್ಯೋತಿ ಜ್ಞಾನದ ಸಂಕೇತವೂ ಹೌದು. ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ದೀಪ ಹಚ್ಚಿ.
ಅಶುಚಿಯಾದ ಬಟ್ಟೆ ಧರಿಸುವುದು : ಲಕ್ಷ್ಮಿ ಸ್ವಚ್ಛತೆಯನ್ನು ಬಯಸುತ್ತಾಳೆ. ಹಾಗಾಗಿ ಅವಳ ಕೃಪಾಕಟಾಕ್ಷ ಬೇಕೆಂದರೆ ಸ್ವಚ್ಛವಾದ ಬಟ್ಟೆಯನ್ನು ಧರಿಸಿ, ನಿಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ.
ಕೋಪ ಮಾಡಿಕೊಳ್ಳುವುದು : ಅತಿಯಾಗಿ ಮಾತನಾಡುವುದು ಅಥವಾ ತುಂಬಾ ಜೋರಾಗಿ ಮಾತನಾಡುವುದು, ಇತರರನ್ನು ನಿಂದಿಸುವುದು, ಇತರರ ಬಗ್ಗೆ ಕೆಟ್ಟದಾಗಿ ಯೋಚಿಸಿದರೆ ಲಕ್ಷ್ಮಿ ನಿಮ್ಮ ಮನೆಯಿಂದ ಹೊರಟು ಹೋಗುತ್ತಾಳೆ. ಶಾಂತಿ ಹಾಗೂ ಪ್ರೀತಿ ಇರುವ ಕಡೆ ಲಕ್ಷ್ಮಿ ನೆಲೆಸುತ್ತಾಳೆ. ಹಾಗಾಗಿ ಅಂತಹ ವಾತಾವರಣವನ್ನು ಕಲ್ಪಿಸಿ.