ಸಾರ್ವಜನಿಕರೊಬ್ಬರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದವನು ಈಗ ತನ್ನ ಪಟ್ಟಣ ಪಂಚಾಯಿತಿ ಸದಸ್ಯತ್ವ ಕಳೆದುಕೊಂಡಿದ್ದಾನೆ. ಇಂತಹದೊಂದು ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ನಲ್ಲಿ ನಡೆದಿದೆ.
ಪ್ರಕರಣದ ವಿವರ: ಕಾರ್ಗಲ್ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ. ಹರೀಶ್ ಎಂಬಾತ ಅಹ್ಮದ್ ಅಬ್ದುಲ್ ಎಂಬವರಿಗೆ ಮಾಂಸ ಮಾರಾಟ ನಡೆಸಲು ಪರವಾನಿಗೆ ಕೊಡಿಸುತ್ತೇನೆ ಎಂದು ಹೇಳಿ ಐವತ್ತು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅಹ್ಮದ್ ಅವರು ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ಗೆ ಅಹ್ಮದ್ ಅಬ್ದುಲ್ 50 ಸಾವಿರ ರೂಪಾಯಿ ನೀಡುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಹರೀಶ್ ನನ್ನು ಬಂಧಿಸಿದ್ದರು.
ಇದೀಗ ಸಾಗರ ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಹರೀಶ್ ಅವರ ಪಟ್ಟಣ ಪಂಚಾಯಿತಿ ಸದಸ್ಯತ್ವವನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಹರೀಶ್ ವಿರುದ್ಧ ಭ್ರಷ್ಟಾಚಾರ ಪ್ರತಿಬಂದಕ ಕಾಯ್ದೆ ಅಡಿ ಕೇಸು ದಾಖಲಾಗಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.