ಮೀರತ್: ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಬಾಲಕಿಗೆ ಹಾರವನ್ನು ಎಸೆಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಬಾಲಕಿಗೆ ಹಾರವನ್ನು ದೂರದಿಂದಲೇ ಕಳುಹಿಸಿದ್ದಾರೆ. ಠಾಕೂರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಹೇಗಿದೆ ಜೋಶ್, ಹೇಗಿದೆ ಥ್ರೋ ? ಎಂದು ಶೀರ್ಷಿಕೆ ನೀಡಿದ್ದಾರೆ.
ವಿಡಿಯೋದಲ್ಲಿ, ಬಾಲಕಿ ದೂರದಿಂದ ಕಟ್ಟಡದ ಟೆರೇಸ್ ಮೇಲೆ ನಿಂತು ಠಾಕೂರ್ ಕಡೆಗೆ ಕೈ ಬೀಸುತ್ತಿರುವುದನ್ನು ಕಾಣಬಹುದು. ಇದನ್ನು ಗಮನಿಸಿದ ಠಾಕೂರ್ ಖುಷಿಯಿಂದಲೇ ಬಾಲಕಿಯತ್ತ ಹಾರ ಎಸೆದಿದ್ದಾರೆ. ಹಾರವನ್ನು ಆಕೆ ಕ್ಯಾಚ್ ಹಿಡಿದಿದ್ದಾಳೆ.
ಮೀರತ್ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮೇಂದ್ರ ತೋಮರ್ ಪರ ಅನುರಾಗ್ ಠಾಕೂರ್ ಪ್ರಚಾರ ನಡೆಸುತ್ತಿದ್ದರು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ-2022ರ ಮೊದಲ ಹಂತವು ಗುರುವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು ಮತ್ತು ಸಂಜೆ 6 ಕ್ಕೆ ಮುಕ್ತಾಯಗೊಂಡಿತು. 403 ಕ್ಷೇತ್ರಗಳ ಪೈಕಿ 58 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಸಂಬಂಧಿತ ಕ್ಷೇತ್ರಗಳ ಪ್ರಚಾರ ಮಂಗಳವಾರ ಸಂಜೆ ಅಂತ್ಯಗೊಂಡಿತ್ತು.