ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅತ್ಯಂತ ಕೈಗೆಟುಕುವ ದರದಲ್ಲಿ ಟಾಟಾ ಟಿಯಾಗೊ EV ಅನ್ನು ಕಂಪನಿ ಪರಿಚಯಿಸಿತ್ತು.
ಇದೀಗ ಟಾಟಾ ಪಂಚ್ ಮಾದರಿಯ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಟಾಟಾ ಪಂಚ್ ಇವಿಯನ್ನು ಈ ವರ್ಷದ ಮಧ್ಯದಲ್ಲಿ ಬಿಡುಗಡೆ ಮಾಡಬಹುದು.
ಟಾಟಾ ಪಂಚ್ ಇವಿ ಇತ್ತೀಚೆಗಷ್ಟೆ ಪ್ರಯೋಗಾರ್ಥ ಸಂಚಾರವನ್ನೂ ನಡೆಸಿದೆ. ಇದೇ ಮೊದಲ ಬಾರಿಗೆ ಪಂಚ್ ಇವಿಯನ್ನು ರಸ್ತೆಗಿಳಿಸಲಾಗಿತ್ತು. ಟಾಟಾ ಪಂಚ್ EV ಅದರ ICE ಆವೃತ್ತಿಯನ್ನು ಹೋಲುತ್ತದೆ. ಆದಾಗ್ಯೂ ಎಲೆಕ್ಟ್ರಿಕ್ ಕಾರಿನಲ್ಲಿ ಕೆಲವು ನಿರ್ದಿಷ್ಟ ಬದಲಾವಣೆಗಳಿರುತ್ತವೆ. ಪೆಟ್ರೋಲ್ ಆವೃತ್ತಿಗಿಂತ ಹೆಚ್ಚಿನ ಫೀಚರ್‌ಗಳು ಎಲೆಕ್ಟ್ರಿಕ್ ಕಾರಿನಲ್ಲಿವೆ. ಸ್ಪೈ ಶಾಟ್‌ಗಳು ಎಲ್ಲಾ ನಾಲ್ಕು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಇದು ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಅನ್ನು ಸಹ ಹೊಂದಿರುವುದು ವಿಶೇಷ.
ಮೂಲಗಳ ಪ್ರಕಾರ ಟಾಟಾ ಪಂಚ್ ಮೈಕ್ರೋ SUV Gen 2 (Sigma) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎನ್ನಲಾಗ್ತಿದೆ. ಇದು ALFA ಆರ್ಕಿಟೆಕ್ಚರ್‌ನ ಮಾರ್ಪಡಿಸಿದ ಆವೃತ್ತಿ. ಟಾಟಾದ ಆಲ್ಟ್ರೋಸ್ ಅನ್ನು ಆಲ್ಫಾ ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗಿದೆ. ಆದರೆ ಪಂಚ್ ಇವಿಗಾಗಿ ಈ ಪ್ಲಾಟ್‌ಫಾರ್ಮ್ ಅನ್ನು ಎಲೆಕ್ಟ್ರಿಕ್ ಎಸ್‌ಯುವಿಗಾಗಿ ಮಾರ್ಪಡಿಸಲಾಗುತ್ತದೆ. ಇದು ಫ್ಲಾಟ್ ಫ್ಲೋರ್ ಅನ್ನು ಹೊಂದಿರುತ್ತದೆ. ಆದ್ದರಿಂದ ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ನೆಲದ ಮೇಲೆ ಜೋಡಿಸಬಹುದು.
ಈ ಮಿನಿ ಎಲೆಕ್ಟ್ರಿಕ್ SUV ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿರಲಿದೆ. ಚಿಕ್ಕ ಬ್ಯಾಟರಿ ಪ್ಯಾಕ್ 26kWh ಎಂದು ನಿರೀಕ್ಷಿಸಲಾಗಿದೆ. Tiago EV ಯಲ್ಲಿ ಕೂಡ ಇದೇ ಬ್ಯಾಟರಿಯನ್ನು ಅಳವಡಿಸಲಾಗಿದೆ. ನೆಕ್ಸಾನ್ EV ಪ್ರೈಮ್‌ನಲ್ಲಿರುವಂತೆ ಎರಡನೇ ಬ್ಯಾಟರಿ ಪ್ಯಾಕ್ 30.2kWh ಆಗಿರಬಹುದು. ಈ ಕಾರು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದ್ರೆ 300 ಕಿಮೀ ಓಡಬಲ್ಲದು.