ರೋಗಿಯನ್ನ ಐಸಿಯುಗೆ ಅಡ್ಮಿಟ್ ಮಾಡಲು ಐವತ್ತು ಸಾವಿರ ರೂಪಾಯಿ ಲಂಚ ಕೇಳಿದ್ದ ಆರೋಪದ ಅಡಿಯಲ್ಲಿ, ವಿಕ್ಟೋರಿಯಾ ಆಸ್ಪತ್ರೆಯ ನಾಲ್ವರು ಸಿಬ್ಬಂದಿ ಮೇಲೆ ಎಫ್ಐಆರ್ ದಾಖಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಯಾದ ಆನಂದ್, ನಾಗೇಶ್, ಗಿರೀಶ್, ರಂಜಿತ್ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ ನೋಡುವುದಾದ್ರೆ, ಲಕ್ಷ್ಮೀ ಎಂಬವರು ತಮ್ಮ ತಾಯಿ ಯಲ್ಲಮ್ಮರನ್ನ ಜನವರಿ 21 ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ದರು. ಅವರಿಗೆ ತಲೆಯ ಭಾಗದಲ್ಲಿ ಆಪರೇಷನ್ ಆಗಿದ್ದರಿಂದ ಜನವರಿ 28ಕ್ಕೆ ಐಸಿಯು ವಾರ್ಡ್ ಗೆ ಶಿಫ್ಟ್ ಮಾಡಬೇಕಾಗಿತ್ತು. ಇಂತಾ ಸಂದರ್ಭದಲ್ಲು, ಐಸಿಯುಗೆ ಶಿಫ್ಟ್ ಮಾಡಬೇಕಂದ್ರೆ 50 ಸಾವಿರ ರೂಪಾಯಿ ನೀಡಬೇಕು. ನಿಮ್ಮ ತಾಯಿ ಬದುಕಬೇಕಂದ್ರೆ ದುಡ್ಡು ಕೊಡಿ, ಇಲ್ಲಾಂದ್ರೆ ಅಡ್ಮಿಟ್ ಮಾಡಿಕೊಳ್ಳೋದಕ್ಕೆ ಆಗಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಹಣ ಇಲ್ಲ ಕಷ್ಟದಲ್ಲಿದ್ದೇವೆ ಅಂದ್ರೂ ದುಡ್ಡು ಕೊಡದಿದ್ರೆ ಐಸಿಯುಗೆ ಶಿಫ್ಟ್ ಮಾಡಲ್ಲ ಎಂದು ಬೆದರಿಸಿದ್ರು. ಎಂದು ಆರೋಪಿಸಿರುವ ಲಕ್ಷ್ಮಿ, ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟರು ಎಂದು ವಿವಿಪುರಂ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ.