ಹಾವು ಅಂದ್ರೆ ಯಾರಿಗೆ ಭಯ ಇಲ್ಲ ಹೇಳಿ…… ಎಲ್ಲೋ ದೂರದಲ್ಲಿ ಬುಸ್ ಅಂತ ಸದ್ದು ಕೇಳಿದ್ರೂ, ಜೀವ ಬಾಯಿಗೆ ಬಂದಿರುತ್ತೆ. ಅಂಥದ್ರಲ್ಲಿ ಹಾವೊಂದು ಹೆಡೆ ಎತ್ತಿಕೊಂಡು ಎದುರಿಗೆ ಬಂದರೆ ಹೇಗಿರುತ್ತೆ? ಇಂಥಹದ್ದೇ ಒಂದು ಸಿಚ್ಯೂವೇಶನ್ ಎದುರಿಸಿದ್ದಾರೆ ರಾಜಸ್ಥಾನದ ಕೋಟಾ ರೈಲ್ವೆ ಸ್ಟೇಶನ್ ಸಿಬ್ಬಂದಿ ವರ್ಗದವರು.
ಅದು ಕೋಟಾದ ರಾವತ್ವಾ ರೈಲ್ವೆ ಸ್ಟೇಶನ್, ಎಂದಿನಂತೆ ರೈಲು ನಿಲ್ದಾಣದಲ್ಲಿ ಜನ ಜಂಗುಳಿ ತುಂಬಿ ತುಳುಕಾಡ್ತಿತ್ತು. ಕೆಲವರು ರೈಲು ಹತ್ತುವ ಗಡಿಬಿಡಿಯಲ್ಲಿ ಇದ್ದರೆ, ಇನ್ನು ಕೆಲವರು ದೂರದ ಊರಿನಿಂದ ಪ್ರಯಾಣಿಸಿ ಸುಸ್ತಾಗಿ ರೈಲಿನಿಂದ ಇಳೀತಾ ಇದ್ದರು. ಅದೇ ರೈಲ್ವೆ ಸ್ಟೆಶನ್‌ನ ಕಂಟ್ರೋಲ್ ರೂಮ್‌ಲ್ಲಿ ಎಂಥ ಗಟ್ಟಿ ಗುಂಡಿಗೆ ಇದ್ದವರೂ ಕೂಡಾ ಗಢಗಢನೆ ನಡಗುವಂತಹ ಒಂದು ಘಟನೆ ನಡೆದಿತ್ತು. ಅಸಲಿಗೆ ಅದೇ ಕಂಟ್ರೋಲ್ ರೂಮ್ನಲ್ಲಿ ನಾಗರ ಹಾವೊಂದು ಹೆಡೆ ಬಿಚ್ಚಿಕೊಂಡು ಕೂತಿತ್ತು.
ಹೀಗೆ ಒಮ್ಮಿಂದೊಮ್ಮೆ ಹಾವು ಹೆಡೆ ಬಿಚ್ಚಿಕೊಂಡು ಕೂತಿರೋದನ್ನ ನೋಡಿದ್ರೆ, ಯಾರು ತಾನೆ ಹೆದರಲ್ಲ ಹೇಳಿ. ಅಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬರು ಹಾವು ಹಾಗೆ ಕೂತಿರೊದನ್ನ ನೋಡಿ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಹಾವು ಹಿಡಿಯೊರನ್ನ ಕರೆದಿದ್ದಾರೆ. ಅವರು ಬಂದು ಹಾವು ಹಿಡಿದಾಗಲೇ ಇಲ್ಲಿ ಕೆಲಸ ಮಾಡುತ್ತಿದ್ದವರ ಜೀವ ವಾಪಸ್ಸು ಬಂದಿರೋ ಹಾಗಿತ್ತು. ಈ ಹಾವು ಕಡಿಮೆ ಅಂದರೂ ನಾಲ್ಕು ಮಾರು ಉದ್ದ ಇತ್ತು ಅನ್ನಲಾಗಿದೆ. ಈಗ ಆ ಹಾವನ್ನ ಹಿಡಿದು ಕಾಡಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ. ಈ ಹಿಂದೆಯೂ ಈ ಕೋಟಾದ ಅಕ್ಕಪಕ್ಕದಲ್ಲಿ ಹಾವು ಹೀಗೆ ನುಸುಳಿಕೊಂಡು ಬಂದ ಪ್ರಕರಣ ಅನೇಕ ಬಾರಿ ಬೆಳಕಿಗೆ ಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ಕೆಲ ನೆಟ್ಟಿಗರು ಈ ಫೋಟೋ ನೋಡಿ ಶಾಕ್ ಆಗಿದ್ದಾರೆ, ಇನ್ನು ಕೆಲವರು ರೈಲ್ವೆ ಸಿಬ್ಬಂದಿಗಳು ಕೆಲಸ ಸರಿಯಾಗಿ ಮಾಡುತ್ತಿಲ್ಲ ಅದಕ್ಕೆ ಸರ್ಪರಾಜ ಡ್ಯೂಟಿಗೆ ಬಂದಿರಬಹುದು ಅಂತ ಕಾಮೆಂಟ್ ಮಾಡಿದ್ದಾರೆ.