ನವದೆಹಲಿಯ ರೈಲ್ವೆ ಸ್ಟೇಶನ್ ಪ್ಲಾಟ್‌ಫಾರಂ ಬಳಿ 30 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪ್ರಯಾಣಿಕರ ಹಿತ ಕಾಯಬೇಕಾಗಿದ್ದ ರೈಲ್ವೆ ಇಲಾಖೆಯ ಸಿಬ್ಬಂದಿಯೇ ಈ ಕೃತ್ಯ ಎಸಗಿದ್ದು, ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ನಾಲ್ವರು ರೈಲ್ವೆಯ ವಿದ್ಯುತ್ ಇಲಾಖೆಯ ಸಿಬ್ಬಂದಿ.
ರೈಲ್ವೆ ಹಳಿಯ ಪಕ್ಕದಲ್ಲೇ ಇದ್ದ ಗುಡಿಸಲಿನಲ್ಲಿ ಈ ಕೃತ್ಯ ಎಸಗಲಾಗಿದೆ. ಇಬ್ಬರು ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ರೆ, ಇನ್ನಿಬ್ಬರು ಹೊರಗೆ ನಿಂತು ಕಾವಲು ಕಾಯುತ್ತಿದ್ರು. ಆರೋಪಿಗಳನ್ನು ಸತೀಶ್ ಕುಮಾರ್, ವಿನೋದ್ ಕುಮಾರ್, ಮಂಗಲ್ ಚಂದ್ ಹಾಗೂ ಜಗದೀಶ್ ಚಂದ್ ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ 3.27ರ ವೇಳೆಗೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ ಘಟನೆ ಬಗ್ಗೆ ಮಾಹಿತಿ ನೀಡಿದ್ಲು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿ ಕರೆದೊಯ್ದಿದ್ದಾರೆ. ಮಹಿಳೆ ಹರಿಯಾಣದ ಫರೀದಾಬಾದ್ ನಿವಾಸಿ. 2 ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ಲು. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ಲು.
ಗೆಳತಿಯೊಬ್ಬಳ ಮೂಲಕ ಆಕೆಗೆ ಸತೀಶ್ ಕುಮಾರ್ ಪರಿಚಯವಾಗಿದ್ದ, ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ. ಗುರುವಾರ ಆಕೆಗೆ ಕರೆ ಮಾಡಿದ್ದ ಸತೀಶ್, ಮಗನ ಹುಟ್ಟುಹಬ್ಬದ ಪಾರ್ಟಿಗೆ ಬರುವಂತೆ ಆಹ್ವಾನಿಸಿದ್ದ. ರಾತ್ರಿ 10.30ರವೇಳೆಗೆ ಆಕೆ ಕೀರ್ತಿ ನಗರ ರೈಲ್ವೆ ಸ್ಟೇಶನ್‌ಗೆ ಬಂದಿದ್ದಾಳೆ. ಸತೀಶ್ ಅವಳನ್ನು ಅಲ್ಲಿಂದ ನವದೆಹಲಿ ರೈಲ್ವೆ ಸ್ಟೇಶನ್‌ಗೆ ಕರೆದೊಯ್ದಿದ್ದಾನೆ.
ಅಲ್ಲಿ ಸತೀಶ್‌ನನ್ನು ಕೂಡಿಕೊಂಡ ಇತರ ಮೂವರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆ ನಡೆದು ನಾಲ್ಕು ಗಂಟೆಗಳೊಳಗಾಗಿ ಪೊಲೀಸರು ಕಾಮುಕರನ್ನು ಬಂಧಿಸಿದ್ದಾರೆ.