ರೈಲಿನಲ್ಲಿ ದೂರದ ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಊಟ-ಪಾನೀಯದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅನೇಕ ಬಾರಿ ಮನೆಯಲ್ಲೇ ಉಪಹಾರ ತಯಾರಿಸಿಕೊಂಡು ಕೊಂಡೊಯ್ಯಬೇಕಾದ ಸ್ಥಿತಿ ಬರುತ್ತದೆ. ಆದ್ರೆ ಇನ್ಮೇಲೆ ಈ ತಾಪತ್ರಯವಿಲ್ಲ.
ಶುದ್ಧ ಸಸ್ಯಾಹಾರ ಸೇವಿಸುವವರಿಗಾಗಿಯೂ ರೈಲ್ವೆ ಇಲಾಖೆಯಿಂದ ಹೊಸ ವ್ಯವಸ್ಥೆ ಆರಂಭವಾಗಿದೆ. ಪ್ರಯಾಣಿಕರಿಗೆ ಇನ್ಮುಂದೆ ಸಂಪೂರ್ಣ ಸಾತ್ವಿಕ ಆಹಾರ ಲಭ್ಯವಾಗಲಿದೆ. IRCTC ಪ್ರಯಾಣಿಕರಿಗೆ ಸಾತ್ವಿಕ ಆಹಾರವನ್ನು ಒದಗಿಸಲು ಇಸ್ಕಾನ್‌ನೊಂದಿಗೆ ಕೈಜೋಡಿಸಿದೆ.
ಇದರ ಅಡಿಯಲ್ಲಿ ಸಾತ್ವಿಕ ಆಹಾರವನ್ನು ಸೇವಿಸುವ ಪ್ರಯಾಣಿಕರಿಗೆ ಇಸ್ಕಾನ್ ದೇವಸ್ಥಾನದ ಗೋವಿಂದ ರೆಸ್ಟೋರೆಂಟ್‌ನಿಂದ ಸಾತ್ವಿಕ ಆಹಾರ ಪೂರೈಕೆಯಾಗಲಿದೆ. ಸಾತ್ವಿಕ ಆಹಾರವನ್ನು ಆರ್ಡರ್ ಮಾಡಿದರೆ ಅದು ನೇರವಾಗಿ ಪ್ರಯಾಣಿಕರ ಆಸನಕ್ಕೇ ತಲುಪಲಿದೆ. IRCTC ಮತ್ತು ISKCON ನಡುವಿನ ಈ ಒಪ್ಪಂದದ ಅಡಿಯಲ್ಲಿ ಈ ಸೇವೆಯು ಪ್ರಸ್ತುತ ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣದಲ್ಲಿ ಲಭ್ಯವಿದೆ. ಸಾತ್ವಿಕ ಆಹಾರವನ್ನು ಮಾತ್ರ ಸೇವಿಸುವ ಪ್ರಯಾಣಿಕರಿಗೆ ರೈಲಿನಲ್ಲಿ ನೀಡುವ ಊಟ, ಉಪಹಾರದ ಶುದ್ಧತೆಯ ಬಗ್ಗೆ ಅನುಮಾನವಿರುತ್ತದೆ. ಈ ಕಾರಣಕ್ಕೆ ರೈಲ್ವೆ ಇಲಾಖೆ ಇಸ್ಕಾನ್‌ನಿಂದಲೇ ಸಾತ್ವಿಕ ಆಹಾರ ತರಿಸುವ ವ್ಯವಸ್ಥೆ ಮಾಡಿದೆ.
ದೂರ ಪ್ರಯಾಣಕ್ಕೆ ಹೋಗುವ ಪ್ರಯಾಣಿಕರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇವನೆ ಮಾಡದವರೂ ಇರುತ್ತಾರೆ. ಅಂತಹ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ. ಪ್ರಯಾಣದ ಸಮಯದಲ್ಲಿ ಸಾತ್ವಿಕ ಆಹಾರವನ್ನು ಸೇವಿಸಲು ಬಯಸಿದರೆ, ನೀವು IRCTC ಇ-ಕ್ಯಾಟರಿಂಗ್ ವೆಬ್‌ಸೈಟ್ ಅಥವಾ ಫುಡ್ ಆನ್ ಟ್ರ್ಯಾಕ್ ಅಪ್ಲಿಕೇಶನ್‌ನಲ್ಲಿ ಬುಕ್ ಮಾಡಬೇಕು. ಇದಕ್ಕಾಗಿ ನೀವು ರೈಲು ಹೊರಡುವ ಕನಿಷ್ಠ ಎರಡು ಗಂಟೆಗಳ ಮೊದಲು PNR ಸಂಖ್ಯೆಯೊಂದಿಗೆ ಫುಡ್ ಆರ್ಡರ್ ಮಾಡಬೇಕು. ಗೋವಿಂದ ರೆಸ್ಟೋರೆಂಟ್ ಒದಗಿಸುವ ಆಹಾರದಲ್ಲಿ ಪ್ರಯಾಣಿಕರಿಗೆ ಹಳೆ ದೆಹಲಿಯ ವೆಜ್ ಬಿರಿಯಾನಿ, ಡಿಲಕ್ಸ್ ಥಾಲಿ, ಮಹಾರಾಜ ಥಾಲಿ, ದಾಲ್ ಮಖ್ನಿ, ಪನೀರ್ ಭಕ್ಷ್ಯಗಳು, ನೂಡಲ್ಸ್ ಮತ್ತು ಇತರ ಸಾತ್ವಿಕ ಆಹಾರಗಳು ಸಿಗುತ್ತವೆ.