ರೈಲುಗಳು ಭಾರತದ ಜೀವನಾಡಿ ಅಂದ್ರೂ ತಪ್ಪಾಗಲಾರದು. ಪ್ರತಿ ನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲುಗಳನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆ ಹಲವು ನಿಯಮಗಳನ್ನು ರೂಪಿಸಿದೆ.
ರೈಲಿನಲ್ಲಿ ಕೆಲವು ವಸ್ತುಗಳ ಸಾಗಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನೇನಾದ್ರೂ ನಿಯಮ ಮೀರಿ ನೀವು ತಂದರೆ ದಂಡದ ಜೊತೆಗೆ ಜೈಲು ಶಿಕ್ಷೆಯೂ ಗ್ಯಾರಂಟಿ.
ಬೆಂಕಿ ಹೊತ್ತಿಕೊಳ್ಳುವಂತಹ ಯಾವುದೇ ವಸ್ತುವನ್ನು ರೈಲಿನಲ್ಲಿ ಕೊಂಡೊಯ್ಯುವಂತಿಲ್ಲ. ಸೀಮೆಎಣ್ಣೆ, ಪೆಟ್ರೋಲ್, ಪಟಾಕಿ, ಗ್ಯಾಸ್ ಸಿಲಿಂಡರ್‌ಗಳಂತಹ ಯಾವುದೇ ವಸ್ತುವನ್ನು ತರಬಾರದೆಂದು ರೈಲ್ವೆ ಇಲಾಖೆ ಕಟ್ಟುನಿಟ್ಟಾಗಿ ಹೇಳಿದೆ. ಇವುಗಳನ್ನು ತಂದಲ್ಲಿ ದಂಡ ಪಾವತಿಯ ಜೊತೆಗೆ ಜೈಲು ಶಿಕ್ಷೆಯನ್ನೂ ಅನುಭವಿಸಬೇಕಾಗಬಹುದು.
ಕೇವಲ ರೈಲಿನಲ್ಲಿ ಮಾತ್ರವಲ್ಲ ರೈಲ್ವೆ ನಿಲ್ದಾಣದ ಆವರಣಕ್ಕೂ ಇವುಗಳನ್ನೆಲ್ಲ ತರುವಂತಿಲ್ಲ. ಬೆಂಕಿ ಕಾಣಿಸಿಕೊಳ್ಳುವ ಅಪಾಯವಿರುವಂತಹ ವಸ್ತುಗಳನ್ನು ನೀವು ತಂದಿದ್ದೇ ಆದಲ್ಲಿ ಇಲಾಖೆ ನಿಮಗೆ 1000 ರೂಪಾಯಿ ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. ಒಣಹುಲ್ಲನ್ನು ಕೂಡ ರೈಲಿನಲ್ಲಿ ಸಾಗಿಸುವಂತಿಲ್ಲ. ರೈಲಿನಲ್ಲಿ ಧೂಮಪಾನವನ್ನು ಕೂಡ ಸಂಪೂರ್ಣವಾಗಿ ನಿಷೇಧಿಸಲಾಗಿದೆ.