ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣಿಸುವ ವೇಳೆ ಅವರಿಗೆ ರಿಯಾಯಿತಿ ನೀಡಲಾಗುತ್ತಿತ್ತಾದರೂ 2020ರ ಮಾರ್ಚ್ ನಿಂದ ಕೋವಿಡ್ ಕಾರಣಕ್ಕೆ ರೈಲ್ವೆ ಇಲಾಖೆ ಇದನ್ನು ಸ್ಥಗಿತಗೊಳಿಸಿತ್ತು. ಈಗ ರೈಲು ಸಂಚಾರ ಎಂದಿನಂತೆ ಆರಂಭವಾಗಿದ್ದರೂ ಸಹ ರಿಯಾಯಿತಿಯನ್ನು ಮುಂದುವರಿಸಿರಲಿಲ್ಲ.
ರೈಲು ಪ್ರಯಾಣದ ವೇಳೆ ಹಿರಿಯ ನಾಗರೀಕರಿಗೆ ರಿಯಾಯಿತಿ ನೀಡಬೇಕೆಂಬ ಕೂಗು ಬಹುತೇಕ ಎಲ್ಲರಿಂದ ಕೇಳಿ ಬರುತ್ತಿರುವ ಮಧ್ಯೆ ಇದೀಗ ರೈಲ್ವೆ ಸಂಸದೀಯ ಸ್ಥಾಯಿ ಸಮಿತಿಯೂ ಸಹ ಹಿರಿಯ ನಾಗರಿಕರಿಗೆ ರಿಯಾಯಿತಿಯನ್ನು ಮರು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಕನಿಷ್ಠ ಸ್ಲೀಪರ್ ದರ್ಜೆ ಮತ್ತು ಎಸಿ ಮೂರನೇ ದರ್ಜೆಯಲ್ಲಾದರೂ ರಿಯಾಯಿತಿಯನ್ನು ಮರು ಜಾರಿಗೊಳಿಸಬೇಕೆಂದು ಶಿಫಾರಸ್ಸು ಮಾಡಲಾಗಿದ್ದು, ಇದರಿಂದ ದುರ್ಬಲ ಮತ್ತು ನಿಜವಾಗಿಯೂ ಅಗತ್ಯವಿರುವ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದೆ.