
ಇದೀಗ ರೈಲೊಂದು ಹೈಜಾಕ್ ಆದ ಸುದ್ದಿ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೊಬ್ಬ ಗಾಬರಿಗೊಂಡು ಪ್ಯಾಸೆಂಜರ್ ರೈಲನ್ನು ಹೈಜಾಕ್ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದ. ಆ ಟ್ವೀಟ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿರುಗಾಳಿ ಬೀಸಿದೆ.
ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನಲ್ಲಿ ರೈಲು ಮಜ್ರಿ ಜಂಕ್ಷನ್ ಮತ್ತು ಸೀತಾಫಲ್ ಮಂಡಿ ನಡುವೆ ತಿರುವು ಪಡೆದಾಗ ಪ್ರಯಾಣಿಕರೊಬ್ಬರು ಭಯಭೀತಗೊಂಡರು. ರೈಲಿನ ಮಾರ್ಗದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿತ್ತು. ಇದರ ಅರಿವಿರದ ಆ ಪ್ರಯಾಣಿಕ ರೈಲನ್ನು ಹೈಜಾಕ್ ಮಾಡಲಾಗಿದೆ ಎಂದು ಟ್ವೀಟರ್ ಮೂಲಕ ಆತಂಕ ಸಹಿತ ಸಂದೇಶ ಹಾಕಿಬಿಟ್ಟರು.
ತನ್ನ ಟ್ವೀಟ್‌ನಲ್ಲಿ ಸಮಸ್ಯೆಯನ್ನು ಪರಿಹರಿಸಲು ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ನಿಗಮ ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರನ್ನು ಟ್ಯಾಗ್ ಮಾಡಿದ್ದ. ಭಾರತೀಯ ರೈಲ್ವೇಯು ಟ್ವೀಟ್ ಗಮನಿಸಿ, ಪರಿಸ್ಥಿತಿಯನ್ನು ತಿಳಿಯಪಡಿಸಿ ಭಯಪಡಬೇಡಿ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿತು.
ಮೇಲಾಗಿ, ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಕೂಡ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, “ಸರ್, ಕಾಜಿಪೇಟಾ ಮತ್ತು ಬಲ್ರಾಶಾ ನಡುವೆ ಕೆಲಸ ನಡೆಯುತ್ತಿದೆ. ಆದ್ದರಿಂದ ರೈಲನ್ನು ಹೈದರಾಬಾದ್ ವಿಭಾಗದ ಮೂಲಕ ಮಾರ್ಗವನ್ನು ಬದಲಿಸಲಾಗಿದೆ. ಗಾಬರಿಯಾಗಬೇಡಿ,” ಎಂದು ಹೇಳಿತು.
“ಹೈಜಾಕ್ ಮಾಡಿದ ರೈಲಿಗೆ” ಸಹಾಯ ಕೋರಿ ಮಾಡಿದ ಟ್ವೀಟ್ ವೈರಲ್ ಆಗಿದ್ದು, ನೆಟ್ಟಿಗರು ರಂಜನೀಯ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದಾರೆ. ಕೆಲವು ಬಳಕೆದಾರರು ಟ್ವೀಟ್ ಅನ್ನು ಗೇಲಿ ಮಾಡಿದರೆ, ಇತರರು ಸುಳ್ಳು ಮಾಹಿತಿಯನ್ನು ಹರಡಿ ಭಯಭೀತಗೊಳಿಸಿದ್ದೀರೆಂದು ಎಂದು ಆ ವ್ಯಕ್ತಿಯನ್ನು ದೂಷಿಸಿದ್ದಾರೆ.
ನಿರ್ಲಕ್ಷ್ಯದಿಂದ ವರ್ತಿಸಿದ್ದಕ್ಕಾಗಿ, ವದಂತಿಗಳನ್ನು ಹರಡಿದ ಮತ್ತು ಸಾರ್ವಜನಿಕವಾಗಿ ಭಯಭೀತಗೊಳಿಸಿದ್ದಕ್ಕೆ ನೀವು ಪ್ರಕರಣ ಬುಕ್ ಮಾಡಬಹುದೇ ? ಕನಿಷ್ಠ ಅವರಿಗೆ ಭಾರಿ ದಂಡ ವಿಧಿಸಿ ಎಂದು ಒಬ್ಬರು ಆಗ್ರಹಿಸಿದ್ದಾರೆ.