ದಾನಪುರ: ರೈಲಿನ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರೈಲ್ವೇ ಸಿಬ್ಬಂದಿ ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದೆ. ಬಿಹಾರದ ದಾನಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ರೈಲ್ವೇ ಸಿಬ್ಬಂದಿ ರೈಲಿನ ಮೇಲ್ಭಾಗಕ್ಕೆ ತೆವಳುತ್ತಾ ಸಾಗಿ ಯುವಕನ ಮೇಲೆ ಶಾಲು ಎಸೆದಿದ್ದಾರೆ. ರೈಲಿನ ಮೇಲ್ಛಾವಣಿಯ ಬಳಿ ಹೈ-ವೋಲ್ಟೇಜ್ ವಿದ್ಯುತ್ ತಂತಿ ಕೂಡ ಇರುವುದರಿಂದ ಮತ್ತಷ್ಟು ಅಪಾಯವಾಗೋ ಸಾಧ್ಯತೆಯಿತ್ತು. ಹೀಗಾಗಿ ಸಿಬ್ಬಂದಿ ಯುವಕನ ಮೇಲೆ ಶಾಲನ್ನು ಎಸೆದು, ಆತನನ್ನು ಕೆಳಗೆ ಎಳೆದಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವಕನ ಮೈಮೇಲೆ ಟವೆಲ್ ಹೊದಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಯುವಕನನ್ನು ರಕ್ಷಿಸಿರೋ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರೈಲ್ವೇ ಸಚಿವಾಲಯ, ಇದು ಭಾರತೀಯ ರೈಲ್ವೇ ನೌಕರರ ಮಾನವೀಯತೆ ಮತ್ತು ಆತ್ಮಸಾಕ್ಷಿಯ ಉದಾಹರಣೆಯಾಗಿದೆ ಎಂದು ಟ್ವೀಟ್ ಮಾಡಿದೆ.
ಯುವಕರನ್ನು ರಕ್ಷಿಸಿದ್ದಕ್ಕಾಗಿ ರೈಲ್ವೆ ಸಿಬ್ಬಂದಿಗೆ ನೆಟ್ಟಿಗರು ವ್ಯಾಪಕವಾಗಿ ಪ್ರಶಂಸಿಸಿದ್ದಾರೆ. ಸಿಬ್ಬಂದಿಯ ಇಂತಹ ಉತ್ತಮ ಕೆಲಸಕ್ಕೆ ಶೌರ್ಯ ಪ್ರಶಸ್ತಿ ನೀಡಬೇಕು. ನಾವು ನಿಜವಾಗಿಯೂ ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.