ರೈಲು ಪ್ರಯಾಣದ ಸಂದರ್ಭದಲ್ಲಿ ಸೀಟಿಗಾಗಿ ಜಗಳ ಸರ್ವೇಸಾಮಾನ್ಯ. ಒಮ್ಮೊಮ್ಮೆ ರಿಸರ್ವ್ ಆಗಿರೋ ಸೀಟುಗಳನ್ನು ಇನ್ಯಾರೋ ಬಂದು ಆಕ್ರಮಿಸಿಕೊಂಡುಬಿಡ್ತಾರೆ. ಇನ್ನು ಕೆಲವರು ಸೀಟನ್ನು ಶೇರ್ ಮಾಡಿಕೊಳ್ಳುವಂತೆ ಒತ್ತಡ ಹಾಕ್ತಾರೆ. ಆಗ ಪ್ರಯಾಣಿಕರ ಮಧ್ಯೆ ಕಿತ್ತಾಟಗಳು ನಡೆಯುತ್ತವೆ.
ಆದ್ರೆ ಇನ್ನು ಮುಂದೆ ರಿಸರ್ವ್ ಆಗಿರೋ ನಿಮ್ಮ ಸೀಟನ್ನು ಬೇರೆಯವರು ಕಬಳಿಸಿದ್ರೆ ನೀವು ಜಗಳವಾಡಬೇಕಿಲ್ಲ. ಯಾಕಂದ್ರೆ ಭಾರತೀಯ ರೈಲ್ವೆ ಇಲಾಖೆಯೇ ನಿಮ್ಮ ನೆರವಿಗೆ ಬರುತ್ತದೆ. ಸಂಸ್ಥೆಯ ಸಹಾಯದಿಂದ ನಿಮ್ಮ ಸೀಟನ್ನು ನೀವು ಮರಳಿ ಪಡೆಯಬಹುದು.
ಕೆಲವೊಮ್ಮೆ ಅನಧಿಕೃತ ಪ್ರಯಾಣಿಕರು ಸ್ಲೀಪರ್‌ನಿಂದ ಹಿಡಿದು ಎಸಿ ಕೋಚ್‌ವರೆಗೂ ಮೊದಲೇ ನಿಗದಿಯಾಗಿರೋ ಸೀಟುಗಳನ್ನು ಆವರಿಸಿಕೊಂಡುಬಿಟ್ಟಿರ್ತಾರೆ. ಅಂಥ ಸಂದರ್ಭದಲ್ಲಿ ನಿಮ್ಮ ಸುತ್ತ ಮುತ್ತ ಟಿಟಿ ಕೂಡ ಇಲ್ಲದೇ ಇದ್ದಾಗ ನೀವು ‘ರೈಲ್ವೆ ಮದದ್’ ಮೂಲಕ ದೂರು ನೀಡಬಹುದು.
ದೂರು ದಾಖಲಿಸುವುದು ಹೇಗೆ ?
ಅನಧಿಕೃತ ಪ್ರಯಾಣಿಕರ ಬಗ್ಗೆ ದೂರು ನೀಡಿ ಸೀಟು ಖಾಲಿ ಮಾಡಲು ರೈಲ್ವೆ ಮದದ್ ವೆಬ್‌ಸೈಟ್‌ಗೆ ವಿಸಿಟ್ ಮಾಡಿ. ಇಲ್ಲಿ https://railmadad.indianrailways.gov.in ಅನ್ನು ನೇರವಾಗಿ ಕ್ಲಿಕ್ ಮಾಡಬಹುದು. ಇಲ್ಲಿ ನೀವು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಂತರ Send OTP ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಮೊಬೈಲ್‌ನಲ್ಲಿ ನೀವು ಸ್ವೀಕರಿಸಿದ OTP ಅನ್ನು ನಮೂದಿಸಬೇಕಾಗುತ್ತದೆ. ನಂತರ ನಿಮ್ಮ ಟಿಕೆಟ್ ಬುಕಿಂಗ್‌ನ PNR ಸಂಖ್ಯೆಯನ್ನು ನಮೂದಿಸಿ. ಈಗ ಟೈಪ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ದೂರನ್ನು ಸಲ್ಲಿಸಿ. ನಂತರ ಘಟನೆಯ ದಿನಾಂಕವನ್ನು ಆಯ್ಕೆಮಾಡಿ. ನಿಮ್ಮ ದೂರನ್ನು ಸಹ ನೀವು ವಿವರವಾಗಿ ಬರೆಯಬಹುದು. ಅದರ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
139ಕ್ಕೂ ಕರೆ ಮಾಡಿಯೂ ದೂರು ನೀಡಬಹುದು
ಪ್ರಯಾಣಿಕರ ಕಾಯ್ದಿರಿಸಿದ ಸೀಟು ಅಥವಾ ಬರ್ತ್ ಅನ್ನು ಅಕ್ರಮವಾಗಿ ಆಕ್ರಮಿಸಿಕೊಂಡರೆ ಮೊದಲು ವಿಷಯವನ್ನು ಆ ರೈಲಿನ ಟಿಟಿಗೆ ತಿಳಿಸಬೇಕು. ಯಾರಾದರೂ ನಿಮ್ಮನ್ನು ಬೆದರಿಸಲು ಪ್ರಯತ್ನಿಸಿದರೆ ರೈಲ್ವೇ ಪೊಲೀಸ್ ಪಡೆ ಸಿಬ್ಬಂದಿಯ ಸಹಾಯವನ್ನು ಸಹ ನೀವು ಕೇಳಬಹುದು. ನೀವು ಆನ್‌ಲೈನ್‌ನಲ್ಲಿ ದೂರು ದಾಖಲಿಸಲು ಸಾಧ್ಯವಾಗದಿದ್ದರೆ, ರೈಲ್ವೆ ಸಹಾಯವಾಣಿ ಸಂಖ್ಯೆ 139ಕ್ಕೆ ದೂರು ಸಲ್ಲಿಸಬಹುದು.