ಕೋಲ್ಕತ್ತಾ: ಮಹಿಳೆಯೊಬ್ಬರು ರೈಲಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಮುಂಬೈ-ಹೌರಾ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.
ಬಾಂಗ್ಲಾ ಮೂಲದ ಮಹಿಳೆಯೊಬ್ಬರು ಮುಂಬೈ-ಹೌರಾ ರೈಲಿನಲ್ಲಿಯೇ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ರೈಲನ್ನು ಆಗ್ನೇಯ ರೈಲ್ವೆಯ ಬಗ್ನಾನ್ ನಿಲ್ದಾಣದಲ್ಲಿಯೇ ಗಂಟೆಗೂ ಹೆಚ್ಚು ಕಾಲ ನಿಲ್ಲಿಸಿದ ಪ್ರಸಂಗ ನಡೆದಿದೆ.
ಬಾಂಗ್ಲಾದ ಸತ್ಖಿರಾ ಜಿಲ್ಲೆಯ ಮಂಜಿಲಾ ಖಾತುನ್ ಹಾಗೂ ಆಕೆಯ ಪತಿ ರೆಜೌಲ್ ಗಾಜಿ ವೈದ್ಯಕೀಯ ಉದ್ದೇಶಕ್ಕಾಗಿ ಮುಂಬೈಗೆ ಹೋಗಿದ್ದರು. ಅಲ್ಲಿಂದ ಮುಂಬೈ-ಹೌರಾ ಟ್ರೇನ್ ನಲ್ಲಿ ವಾಪಸ್ ಆಗುತ್ತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.
ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿರುವ ಬಗ್ಗೆ ಪ್ರಯಾಣಿಕರು ಟಿಟಿಗೆ ತಿಳಿಸಿದ್ದಾರೆ. ತಕ್ಷಣ ಟಿಟಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಷ್ಟೊತ್ತಿಗಾಗಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ರೈಲನ್ನು ಬಗ್ನಾನ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ರೈಲ್ವೆ ಅಧಿಕಾರಿಗಳು ನಿಲ್ದಾಣದ ಬಳಿ ಆಂಬ್ಬುಲೆನ್ಸ್ ವ್ಯವಸ್ಥೆ ಮಾಡಿ ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸಧ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಂಟೆಗೂ ಹೆಚ್ಚು ಕಾಲ ನಿಲ್ದಾಣದಲ್ಲಿ ರೈಲು ನಿಲ್ಲಿಸಲಾದ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೆ ಅಧಿಕಾರಿಗಳು ಮಾನವೀಯ ಆಧಾರದ ಮೇಲೆ ರೈಲು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.