ನವದೆಹಲಿ: ದೇಶಾದ್ಯಂತ ರೈತರು ಕೇಂದ್ರದ ನೂತನ ಕೃಷಿ ಕಾಯ್ದೆ ತಿದ್ದುಪಡಿ ವಿರುದ್ಧ ಸಿಡಿದೆದ್ದಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳುತ್ತಿದ್ದು, ಕಾಯ್ದೆ ವಾಪಸ್ ಪಡೆಯುವ ಯೋಚನೆ ಸರ್ಕಾರಕ್ಕೆ ಇಲ್ಲ ಎಂಬುದನ್ನು ಮತ್ತೊಮ್ಮೆ ಪರೋಕ್ಷವಾಗಿ ಹೇಳಿದ್ದಾರೆ.
ಎಫ್ ಐಸಿಸಿಐ 93 ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹೊಸ ಕೃಷಿ ತಿದ್ದುಪಡಿ ಕಾಯ್ದೆಯಿಂದ ರೈತರ ಆದಾಯ ದ್ವಿಗುಣವಾಗಲಿದೆ. ಅದರಲ್ಲೂ ಸಣ್ಣ ರೈತರಿಗೆ ಅನುಕೂಲವಾಗಲಿದೆ. ರೈತರಿಗೆ ತಾವು ಬೆಳೆದ ಬೆಳೆಗಳ ಮಾರಾಟದ ಬಗ್ಗೆ ಸ್ವಾತಂತ್ರ್ಯ ನೀಡಲಾಗಿದೆ ಎಂದರು.
ರೈತರು ತಮ್ಮ ಉತ್ಪನ್ನಗಳನ್ನು ಸ್ಥಳೀಯ ಹಾಗೂ ರಾಷ್ಟ್ರಿಯ ಮಾರುಕಟ್ಟೆಗಳಲ್ಲಿ ಮಾರಬಹುದು. ಇಲ್ಲವೇ ಡಿಜಿಟಲ್ ವೇದಿಕೆಯಲ್ಲೂ ಮಾರಬಹುದು. ಹಾಗಾಗಿ, ರೈತರಿಗೆ ಹೊಸ ಮಾರುಕಟ್ಟೆ ಲಭ್ಯವಾಗಿದೆ. ಕೃಷಿ ಮೂಲಭೂತ ಸೌಕರ್ಯ, ಆಹಾರ ಸಂಸ್ಕರಣೆ, ಶೇಖರಣೆ ನಡುವೆ ಇದ್ದ ಗೋಡೆ ನಿವಾರಣೆ ಮಾಡಿದ್ದೇವೆ. ಸಣ್ಣ ಭೂಮಿ ಹೊಂದಿರುವ ರೈತರಿಗೂ ಈ ನೀತಿಯಿಂದ ಲಾಭವಿದೆ ಎಂದು ಹೇಳಿದರು.
ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಎಥನಾಲ್ ತಯಾರಿಗೆ ಒತ್ತು ನೀಡಲಾಗಿದೆ. ಗ್ರಾಮೀಣ ಕ್ಷೇತ್ರಗಳಲ್ಲಿ ಅಗ್ರೋ ಇಂಡಸ್ಟ್ರೀಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಖಾಸಗಿ ಕ್ಷೇತ್ರದ ಹೂಡಿಕೆಯಿಂದ ಹಲವು ಸಮಸ್ಯೆಗಳು ಪರಿಹಾರವಾಗಲಿದೆ ಎಂದು ತಿಳಿಸಿದ್ದಾರೆ.