ಕೃಷಿಕರು ಇಂದು ಕೆಲಸಗಾರರ ಸಮಸ್ಯೆ ಎದುರಿಸುತ್ತಿದ್ದು, ಹೀಗಾಗಿ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಗತಿ ಕಾಣಲಾಗುತ್ತಿಲ್ಲ. ಇದರ ಮಧ್ಯೆ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪೂರೈಸಿರುವ ಹವ್ಯಾಸ್ ಎಂಬ ಯುವಕ ಡ್ರೋನ್ ಅಭಿವೃದ್ಧಿಪಡಿಸಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಹವ್ಯಾಸ್ ರೂಪಿಸಿರುವ ಡ್ರೋನ್ ಪ್ರದರ್ಶನಕ್ಕೆ ಇಟ್ಟಿದ್ದು, ಇದರ ಮೂಲಕ ಬೀಜ ಬಿತ್ತನೆ, ಔಷಧಿ ಸಿಂಪಡಣೆ, ಬೆಳೆ ಸಮೀಕ್ಷೆ ಸೇರಿದಂತೆ ಹಲವು ಕಾರ್ಯಗಳನ್ನು ಮಾಡಬಹುದಾಗಿದೆ.
ಈ ಡ್ರೋನ್ ನಲ್ಲಿ ಬೆಳೆಗೆ ಯಾವ ರೋಗ ಬಂದಿದೆ ಹಾಗೂ ಎಷ್ಟು ಇಳುವರಿ ನೀಡುತ್ತದೆ ಎಂಬ ಮಾಹಿತಿಯನ್ನೂ ದಾಖಲಿಸಬಹುದು ಎಂದು ಹೇಳಲಾಗಿದೆ. 20 ಎಕರೆಗೂ ಅಧಿಕ ಭೂಮಿ ಹೊಂದಿರುವ ರೈತರಿಗೆ ಇದು ಅನುಕೂಲಕರವಾಗಿದ್ದು, 15 ನಿಮಿಷ ಚಾರ್ಜ್ ಮಾಡಿದರೆ 1.5 ಕಿಲೋಮೀಟರ್ ವರೆಗೆ ಬಿತ್ತನೆ ಮಾಡಬಹುದಾಗಿದೆ.
ಗೂಗಲ್ ಮ್ಯಾಪ್ ಮೂಲಕ ಕಾರ್ಯನಿರ್ವಹಿಸುವ ಈ ಡ್ರೋನ್ ಅನ್ನು ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿದ್ದು, ಎಕರೆಗೆ 600 ರೂಪಾಯಿ ಬಾಡಿಗೆ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.