ಮಂಡ್ಯ : ಕೊರೊನಾ ಹಾವಳಿಯಿಂದಾಗಿ ಸರ್ಕಾರವು ಜಾತ್ರೆ ಸೇರಿದಂತೆ ಹಲವು ವಿಷಯಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಆದರೂ ಕೆಲವು ಸಂಪ್ರದಾಯಗಳ ಆಚರಣೆಗೆ ಜನರು ಮುಂದಾಗುತ್ತಿದ್ದಾರೆ. ಹೀಗೆ ದನದ ಜಾತ್ರೆಗೆ ಪಟ್ಟು ಹಿಡಿದಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ನಡೆದಿದೆ.
ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಹೇಮಗಿರಿಯಲ್ಲಿ ಈ ಘಟನೆ ನಡೆದಿದೆ. ಈ ಭಾಗದಲ್ಲಿ ಪ್ರತಿ ವರ್ಷ ಜಾನುವಾರಗಳ ಜಾತ್ರೆ ಭರ್ಜರಿಯಾಗಿ ನಡೆಯುತ್ತದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಈ ಜಾತ್ರೆ ನಡೆದಿರಲಿಲ್ಲ. ಈ ವರ್ಷವಾದರೂ ಮಾಡಬೇಕು ಎಂದು ರೈತರು ಮುಂದಾಗಿದ್ದರು.
ಇನ್ನೂ ಕೊರೊನಾ ಹಾವಳಿ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾನುವಾರ ಜಾತ್ರೆಗೆ ಅನುಮತಿ ನೀಡಿರಲಿಲ್ಲ. ಆದರೆ, ನೂರಾರು ಸಂಖ್ಯೆಯಲ್ಲಿ ರೈತರು ಜಾನುವಾರಗಳನ್ನು ತೆಗೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ಜಾತ್ರೆಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಆಗ ಪೊಲೀಸರು ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಕೆಲವು ರೈತರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಕೆಲವು ರೈತರು ಗಾಯಗೊಂಡಿದ್ದು, ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆ ನಂತರ ರೈತರ ಒತ್ತಾಯಕ್ಕೆ ಮಣಿದ ಪೊಲೀಸರು, ಕೊರೊನಾ ನಿಯಮ ಪಾಲಿಸಿ ಜಾತ್ರೆ ನಡೆಸುವಂತೆ ಸೂಚಿಸಿದ್ದಾರೆ.