ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ರೈತರಿಗೆ ನೆಮ್ಮದಿ ಸುದ್ದಿ ನೀಡಿದ್ದು,
ಮಳೆಯಿಂದಾಗಿ ಹಾನಿಯಾಗಿದ್ದ ಬೆಳೆಗಳಿಗೆ ನೀಡುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಅತಿವೃಷ್ಟಿ ವಿಚಾರವಾಗಿ ಮಾತನಾಡಿದ ಸಿಎಂ, ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಈಗಾಗಲೇ 969 ಕೋಟಿ ರೂಪಾಯಿ ಪರಿಹಾರ ಒದಗಿಸಲಾಗಿದೆ. ರಾಜ್ಯದಲ್ಲಿನ 10 ಲಕ್ಷಕ್ಕೂ ಅಧಿಕ ರೈತರಿಗೆ ಪರಿಹಾರ ನೀಡಲಾಗಿದೆ. ಆದರೆ, ಪರಿಹಾರ ಮೊತ್ತವನ್ನು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ಎನ್.ಡಿ.ಆರ್.ಎಫ್ ನ ಮಾರ್ಗಸೂಚಿ ಪ್ರಕಾರ, ಈಗಾಗಲೇ ರಾಜ್ಯ ಸರ್ಕಾರವು ಒಣಭೂಮಿಯಲ್ಲಿ ಹಾನಿಯಾದ ಪ್ರತಿ ಹೆಕ್ಟೇರ್ ಬೆಳೆಗೆ 6,800 ರೂಪಾಯಿ ಹಾಗೂ ನೀರಾವರಿ ಭೂಮಿಯಲ್ಲಿ ಹಾನಿಯಾದ ಪ್ರತಿ ಹೆಕ್ಟೇರ್ ಬೆಳೆಗೆ 13,500 ರೂಪಾಯಿ ನೀಡಲಾಗುತ್ತಿದೆ.
ಆದರೆ, ಒಣಭೂಮಿಯಲ್ಲಿ ಹಾನಿಯಾದ ಬೆಳೆಗೆ ಪ್ರತಿ ಹೆಕ್ಟೇರ್ ಗೆ ಮತ್ತೆ 6,800 ರೂಪಾಯಿ ಸೇರಿಸಿ 13,600 ರೂಪಾಯಿ ಪರಿಹಾರ ನೀಡಲಾಗುವುದು. ನೀರಾವರಿ ಭೂಮಿಯಲ್ಲಿ ಹಾನಿಯಾದ ಪ್ರತಿ ಹೆಕ್ಟೇರ್ ಬೆಳೆಗೆ 11,500 ರೂಪಾಯಿ ಸೇರಿಸಿ 25 ಸಾವಿರ ಪರಿಹಾರ ನೀಡಲಾಗುತ್ತದೆ. ತೋಟಗಾರಿಕಾ ಬೆಳೆ ಹಾನಿಗಾಗಿ ಪ್ರತಿ ಹೆಕ್ಟೇರ್ ಗೆ 18 ಸಾವಿರ ರೂಪಾಯಿ ಜೊತೆಗೆ 10 ಸಾವಿರ ರೂಪಾಯಿ ಸೇರಿಸಿ 28 ಸಾವಿರ ರೂಪಾಯಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯ ಸರ್ಕಾರಕ್ಕೆ 1,200 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಹೇಳಿದ್ದಾರೆ.