ರಾಜ್ಯ ಸರ್ಕಾರ ಮನೆಬಾಗಿಲಲ್ಲೇ ಜಾನುವಾರುಗಳ ಚಿಕಿತ್ಸೆಗಾಗಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಸಂಚಾರಿ ಪಶು ಅಂಬುಲೆನ್ಸ್ ಸೇವೆ ಆರಂಭಿಸುತ್ತಿದೆ. ಮೇ 7 (ನಾಳೆ) ರ ಶನಿವಾರ ಈ ಸೇವೆಗೆ ಚಾಲನೆ ಸಿಗುತ್ತಿದೆ.
ವಿಧಾನಸೌಧದಲ್ಲಿ ಕೇಂದ್ರ ಪಶುಸಂಗೋಪನೆ ಸಚಿವ ಪುರುಷೋತ್ತಮ ರೂಪಾಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗಣ್ಯರ ಸಮ್ಮುಖದಲ್ಲಿ ಸಂಚಾರಿ ಪಶು ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗುತ್ತಿದ್ದು, ಈ ವಾಹನಗಳ ನಿಗಾ ವ್ಯವಸ್ಥೆಗಾಗಿಯೇ ಪ್ರತ್ಯೇಕ ಕಾಲ್ ಸೆಂಟರ್ ಸ್ಥಾಪಿಸಲಾಗಿದೆ.
ಒಟ್ಟು 275 ಸಂಚಾರಿ ಪಶು ಅಂಬುಲೆನ್ಸ್ ಗಳ ಸೇವೆಯನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು, ಈ ಪೈಕಿ ಮೊದಲ ಹಂತದಲ್ಲಿ ಮೇ 7ರಂದು ಒಟ್ಟು 70 ಅಂಬುಲೆನ್ಸ್ ಗಳು ಲೋಕಾರ್ಪಣೆಗೊಳ್ಳುತ್ತಿದೆ.
ಜಾನುವಾರುಗಳ ಚಿಕಿತ್ಸೆಗಾಗಿ ರೈತರು ಟೋಲ್ ಫ್ರೀ ಸಂಖ್ಯೆ 1962 ಕ್ಕೆ ಕರೆ ಮಾಡಬಹುದಾಗಿದ್ದು, ಪ್ರತಿ ಸಂಚಾರಿ ಪಶು ಅಂಬುಲೆನ್ಸ್ ನಲ್ಲಿ ಪಶುವೈದ್ಯರು, ಪಶುವೈದ್ಯ ಸಹಾಯಕ ಮತ್ತು ವಾಹನ ಚಾಲಕ ಕಮ್ ಡಿ ದರ್ಜೆ ನೌಕರರು ಕಾರ್ಯನಿರ್ವಹಿಸಲಿದ್ದಾರೆ. ರೈತರು ಕರೆ ಮಾಡಿದ ತಕ್ಷಣ ಮನೆಬಾಗಿಲಲ್ಲೇ ಬಂದು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.