ವಿವಿಧ ಯೋಜನೆಗಳ ಮೂಲಕ ಮಹಿಳೆಯರೂ ಸೇರಿದಂತೆ ವಿವಿಧ ವರ್ಗಗಳ ಜನತೆಗೆ ಹಲವು ಸೌಲಭ್ಯ ಕಲ್ಪಿಸಿಕೊಟ್ಟ ರಾಜ್ಯ ಸರ್ಕಾರ ಈಗ ರೈತರ ನೆರವಿಗೆ ಧಾವಿಸಲು ಸಿದ್ಧವಾಗಿದೆ.
ರೈತ ಶಕ್ತಿ ಯೋಜನೆಯಡಿ ಕೃಷಿ ಬಳಕೆಗಾಗಿ ನೀಡುವ ಡೀಸೆಲ್ ಸಹಾಯಧನವನ್ನು ಪ್ರತಿ ಎಕರೆಗೆ 250 ರೂಪಾಯಿಗಳಿಂದ 500 ರೂಪಾಯಿಗಳಿಗೆ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದ್ದು, ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ವಿಧಾನ ಪರಿಷತ್ ನಲ್ಲಿ ಈ ವಿಷಯ ತಿಳಿಸಿದ್ದಾರೆ.
ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಉತ್ತೇಜಿಸಲು ಹಾಗೂ ಇಂಧನ ವೆಚ್ಚದ ಹೊರೆ ಕಡಿಮೆ ಮಾಡುವ ಸಲುವಾಗಿ ರೈತರಿಗೆ ಪ್ರಸ್ತುತ ಪ್ರತಿ ಎಕರೆಗೆ 250 ರೂಪಾಯಿಗಳಂತೆ ಗರಿಷ್ಠ 5 ಎಕರೆಗೆ ಸಹಾಯಧನ ನೀಡಲಾಗುತ್ತಿದ್ದು, ಇದನ್ನು 500 ರೂಪಾಯಿಗಳಿಗೆ ಹೆಚ್ಚಿಸುವ ಕುರಿತು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.