
ಬೆಂಗಳೂರು: ಎಕ್ಸಿಟ್ ಪೋಲ್ ಬಗ್ಗೆ ನನಗೆ ನಂಬಿಕೆಯಿಲ್ಲ, ನನ್ನ ನಂಬಿಕೆ 141 ಸಂಖ್ಯೆ. ಕಾಂಗ್ರೆಸ್ ಗೆ ಬಹುಮತ ಬರುತ್ತದೆ. ಇದು ನನ್ನ ಅಚಲವಾದ ನಂಬಿಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಸಮೀಕ್ಷೆಯಲ್ಲಿ ಕಾಂಗ್ರೆಸ್ ಪರ ಅಭಿಪ್ರಾಯ ಬಂದಿದ್ದಕ್ಕೆ ಸಂತೋಷ. ಆದರೆ ನನ್ನ ನಂಬಿಕೆ 141 ಸೀಟ್ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದು. ನಾನು ಪಕ್ಷಕ್ಕಾಗಿ ಬಹಳ ಶ್ರಮಿಸಿದ್ದೇನೆ. ಜವಾಬ್ದಾರಿ ಕೊಟ್ಟಾಗಿನಿಂದ ನಾನು ಮಲಗಿಲ್ಲ, ಮಲಗಲೂ ಬಿಟ್ಟಿಲ್ಲ. ನನಗೆ ವಿಶ್ವಾಸವಿದೆ. ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದರು.
ರೆಸಾರ್ಟ್ ರಾಜಕೀಯ ಮುಗಿದು ಹೋಗಿದೆ. ಅದೆಲ್ಲ ಹಳೆಯ ಕಾಲ, ಎಲ್ಲಾ ಪಕ್ಷದವರು ಅವರವರ ಶಾಸಕರನ್ನು ಹಿಡಿದಿಟ್ಟು ಕೊಳ್ತಾರೆ. ಬಿಜೆಪಿ ಎಷ್ಟೇ ಹಣ ಸುರಿದಿರಬಹುದು, ಎಷ್ಟೇ ನಾಯಕರು ಬಂದು ಪ್ರಚಾರ ಮಾಡಿರಬಹುದು ಆದರೆ ಕಾಂಗ್ರೆಸ್ ಗೆ ಬಹುಮತ ಬರಲಿದೆ ಎಂದು ಹೇಳಿದರು.
ಕಪ್ ನಮ್ಮದೇ ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಕಪ್ ಅಶೋಕ್ ಅವರೇ ಇಟ್ಟುಕೊಳ್ಳಲಿ. ಆದರೆ ಸರ್ಕಾರ ನಾವು ರಚನೆ ಮಾಡುತ್ತೇವೆ. ಉತ್ತಮ ಆಡಳಿತ ನೀಡುತ್ತೆವೆ ಎಂದು ಟಾಂಗ್ ನೀಡಿದರು.