ಕುಂಬಳಕಾಯಿಯಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ತಿನ್ನಲು ರುಚಿಯಾಗಿರುವುದಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಇದರಿಂದ ತಯಾರಿಸುವ ಕೂಟು ರುಚಿಯಾಗಿರುತ್ತದೆ. ಅದನ್ನು ಮಾಡುವುದು ಹೇಗೆ ಅನ್ನೋದನ್ನ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು
ಕುಂಬಳಕಾಯಿ ಹೋಳುಗಳು 2 ಕಪ್
ತೊಗರಿ ಬೇಳೆ 3/4 ಕಪ್
ಅರಿಶಿಣ 1/4 ಚಮಚ
ಖಾರದ ಪುಡಿ 1 ಚಮಚ
ಕರಿಬೇವು 1 ಎಸಳು
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ 2 ಚಮಚ ಕಡಲೇಕಾಯಿ ಎಣ್ಣೆ, ಸಾಸಿವೆ, ಒಣಮೆಣಸಿನಕಾಯಿ, ಜೀರಿಗೆ, 1 ಕಪ್ ಕೊಬ್ಬರಿ ತುರಿ, ಮೆಣಸು 1 ಟೇಬಲ್ ಚಮಚ, ಧನಿಯ 1 ಟೇಬಲ್ ಚಮಚ.
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ ತೊಗರಿಬೇಳೆ, ಉಪ್ಪು, ಖಾರದ ಪುಡಿ, ಅರಿಶಿಣ ಹಾಕಿ ಕುಕ್ಕರಿನಲ್ಲಿಟ್ಟು ಮೂರು ಸೀಟಿ ಕೂಗಿಸಬೇಕು. ತೊಗರಿಬೇಳೆ ನುಣ್ಣಗೆ ಬೇಯುವಂತೆ ನೋಡಿಕೊಳ್ಳಬೇಕು.
ಜೀರಿಗೆ, ಧನಿಯ, ಮೆಣಸು ಸ್ವಲ್ಪ ಬೆಚ್ಚಗಾಗುವಂತೆ ಹುರಿಯಿರಿ. ಅದಕ್ಕೆ ಕೊಬ್ಬರಿ ತುರಿ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಕುಂಬಳಕಾಯಿ ಹೋಳುಗಳನ್ನು ಬೇಯಿಸಿಕೊಳ್ಳಬೇಕು. ಬೇಯಿಸಿಕೊಂಡ ಹೋಳುಗಳಿಗೆ ರುಬ್ಬಿಕೊಂಡ ಮಸಾಲೆ ಹಾಕಿ ಬೇಯಿಸಿಕೊಳ್ಳಬೇಕು.
ಬಳಿಕ ಒಗ್ಗರಣೆಗೆ ಬಾಣಲಿಯಿಟ್ಟು 2 ಚಮಚ ಎಣ್ಣೆ ಹಾಕಿ ಸಾಸಿವೆ, ಒಣಮೆಣಸಿನಕಾಯಿ, ಕರಿಬೇವು ಹಾಕಿ. ಒಗ್ಗರಣೆಯನ್ನು ಬೇಯಿಸಿಕೊಂಡ ಮಸಾಲೆಗೆ ಹಾಕಿ. ಬಳಿಕ ಬೆಂದ ತೊಗರಿಬೇಳೆ ಮಿಶ್ರಣವನ್ನು ಇದಕ್ಕೆ ಸೇರಿಸಿ ಕೈಯಾಡಿಸಿ. ಈಗ ಬಿಸಿಬಿಸಿ ರುಚಿರುಚಿಯಾದ ಕುಂಬಳಕಾಯಿ ಕೂಟು ಅನ್ನದ ಜೊತೆ ಸವಿಯಲು ಸಿದ್ಧ.