
ಸೋರೆಕಾಯಿ ಸಾಂಬಾರು, ಪಲ್ಯ, ಹಲ್ವಾ ಮಾಡಿಕೊಂಡು ಸವಿಯುತ್ತಿರುತ್ತೇವೆ. ಸೋರೆಕಾಯಿಯಿಂದ ರುಚಿಕರವಾದ ಚಟ್ನಿ ಕೂಡ ಮಾಡಬಹುದು. ಅನ್ನ, ದೋಸೆ, ಇಡ್ಲಿ ಜತೆ ತಿನ್ನಲು ಇದು ಚೆನ್ನಾಗಿರುತ್ತದೆ ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
1 ½ ಕಪ್- ಸೋರೆಕಾಯಿ ಹೋಳುಗಳು ಸಣ್ಣಗೆ ಕತ್ತರಿಸಿದ್ದು, 1ಟೀ ಸ್ಪೂನ್-ಎಣ್ಣೆ, 3-ಹಸಿಮೆಣಸು, ¼ ಕಪ್-ಧನಿಯಾ ಬೀಜ, 4-ಬೆಳ್ಳುಳ್ಳಿ ಎಸಳು, ½ ಇಂಚು-ಶುಂಠಿ, ಹುಣಸೆಹಣ್ಣು-ನೆಲ್ಲಿಕಾಯಿ ಗಾತ್ರದ್ದು, 1 ಟೀ ಸ್ಪೂನ್- ಬೆಲ್ಲ, ಉಪ್ಪು-ರುಚಿಗೆ ತಕ್ಕಷ್ಟು, ಇನ್ನು ಒಗ್ಗರಣೆಗೆ-1 ಟೇಬಲ್ ಸ್ಪೂನ್- ಎಣ್ಣೆ, 1 ಟೀ ಸ್ಪೂನ್- ಕಡಲೆಬೇಳೆ, 1 ಟೀ ಸ್ಪೂನ್-ಸಾಸಿವೆ, 4-ಒಣಮೆಣಸು, 10-ಕರಿಬೇವಿನ ಎಸಳು, ½ ಟೀ ಸ್ಪೂನ್- ಖಾರದ ಪುಡಿ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ. ಅದು ಬಿಸಿಯಾಗುತ್ತಲೇ ಸೋರೆಕಾಯಿ ಹೋಳು, ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಒಗ್ಗರಣೆಯ ಸಾಮಾಗ್ರಿಗಳನ್ನು ಬಿಟ್ಟು ಉಳಿದೆಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ನಯವಾಗಿ ರುಬ್ಬಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಗ್ಗರಣೆ ಪಾತ್ರೆ ಇಟ್ಟು ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಕಡಲೆಬೇಳೆ, ಸಾಸಿವೆ, ಒಣಮೆಣಸು, ಕರಿಬೇವು ಹಾಕಿ ನಂತರ ಖಾರದ ಪುಡಿ ಹಾಕಿ ಗ್ಯಾಸ್ ಆಫ್ ಮಾಡಿ ಇದನ್ನು ರುಬ್ಬಿಕೊಂಡ ಮಿಶ್ರಣಕ್ಕೆ ಹಾಕಿದರೆ ರುಚಿಯಾದ ಚಟ್ನಿ ರೆಡಿ.