ಬಿಸಿಬಿಸಿ ಇಡ್ಲಿಗೆ ಚಟ್ನಿ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ. ಆದರೆ ಕೆಲವೊಮ್ಮೆ ಇಡ್ಲಿ ಮಾಡುವಾಗ ಹದ ತಪ್ಪುತ್ತದೆ. ಅಂತಹವರಿಗೆ ಸುಲಭವಾಗಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಇಡ್ಲಿ ರವೆ -3 ಕಪ್, ಉದ್ದಿನಬೇಳೆ-1ಕಪ್, ಅಡುಗೆ ಸೋಡಾ-ಚಿಟಿಕೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಮೊದಲಿಗೆ ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು ನೀರು ಹಾಕಿ 4 ಗಂಟೆಗಳ ಕಾಲ ನೆನೆಸಿಡಿ. ನಂತರ ಇನ್ನೊಂದು ಬಟ್ಟಲಿಗೆ ಅಕ್ಕಿ ರವೆಯನ್ನು ಒಂದು ಸಲ ತೊಳೆದು 1 ನಿಮಿಷಗಳ ಕಾಲ ಹಾಗೇಯೇ ಬಿಡಿ. ರವೆ ಕೆಳಭಾಗದಲ್ಲಿ ಉಳಿದು ನೀರು ಮೇಲೆ ಇರುತ್ತದೆ. ಆ ನೀರನ್ನು ಹೊರಗೆ ಚೆಲ್ಲಿ ರವೆಗೆ ನೀರು ಸೇರಿಸಿ 4 ಗಂಟೆಗಳ ಕಾಲ ನೆನೆಸಿ ಇಡಿ. ನಂತರ ಒಂದು ಮಿಕ್ಸಿ ಜಾರಿಗೆ ಉದ್ದಿನ ಬೇಳೆ ಹಾಕಿ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ.
ನಂತರ ನೆನೆಸಿಟ್ಟು ರವೆಯನ್ನು ಕೈಯಿಂದ ಹಿಂಡಿ ಉದ್ದಿನಬೇಳೆಯ ಮಿಶ್ರಣಕ್ಕೆ ಸೇರಿಸಿ. ರವೆಯ ನೀರನ್ನು ಸೇರಿಸಬೇಡಿ. ನಂತರ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 8 ಗಂಟೆಗಳ ಕಾಲ ಹಾಗೆಯೇ ಇಡಿ. ನಂತರ ಚಿಟಿಕೆ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿಕೊಂಡು ಇಡ್ಲಿ ತಟ್ಟೆಗೆ ಎಣ್ಣೆ ಹಚ್ಚಿ ಅದಕ್ಕೆ ಇಡ್ಲಿ ಮಿಶ್ರಣ ಹಾಕಿ 5 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿಕೊಳ್ಳಿ.