ಚಪಾತಿ, ಪರೋಟ ಮಾಡಿದಾಗ ಪನ್ನೀರ್ ಗೀ ರೋಸ್ಟ್ ಇದ್ದರೆ ಹೊಟ್ಟೆಗೆ ಹೋಗಿದ್ದೇ ತಿಳಿಯುವುದಿಲ್ಲ. ಅಷ್ಟು ರುಚಿಕರವಾಗಿರುತ್ತೆ ಈ ಪನ್ನೀರ್ ಗೀ ರೋಸ್ಟ್. ಮಾಡುವ ವಿಧಾನ ಕೂಡ ಅಷ್ಟೇನೂ ಕಷ್ಟವಿಲ್ಲ. ಭಾನುವಾರ ಮನೆಮಂದಿಯೆಲ್ಲಾ ಒಟ್ಟಿಗೆ ಸೇರಿದಾಗ ಇದನ್ನು ಮಾಡಿಕೊಂಡು ಸವಿಯಿರಿ.
ಪನ್ನೀರ್-200 ಗ್ರಾಂ, 4- ಕೆಂಪು ಮೆಣಸು, 2 ಟೀ ಸ್ಪೂನ್-ಕೊತ್ತಂಬರಿ ಪುಡಿ, 1 ಟೀ ಸ್ಪೂನ್- ಜೀರಿಗೆ ಪುಡಿ, ½ ಟೀ ಸ್ಪೂನ್ –ಮೆಂತೆ ಕಾಳು, ರುಚಿಗೆ ತಕ್ಕಷ್ಟು ಉಪ್ಪು, ¼ ಟೀ ಸ್ಪೂನ್ ಅರಿಶಿನ, 3 ಟೇಬಲ್ ಸ್ಪೂನ್- ತುಪ್ಪ, ಈರುಳ್ಳಿ-1, ¼ ಮೊಸರು, ಕರಿಬೇವು-ಸ್ವಲ್ಪ, ಕಾಳು ಮೆಣಸು-1 ಟೀ ಸ್ಪೂನ್.
ಮೊದಲಿಗೆ ಒಂದು ಪ್ಯಾನ್ ನಲ್ಲಿ ಜೀರಿಗೆ, ಕೊತ್ತಂಬರಿ, ಕಾಳು ಮೆಣಸು, ಮೆಂತೆಕಾಳು, ಮೆಣಸನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ನಂತರ ಈ ಮಸಾಲವನ್ನು ಒಂದು ಮಿಕ್ಸಿ ಜಾರಿಯಲ್ಲಿ ಪುಡಿಕೊಳ್ಳಿ. ನಂತರ ಇದಕ್ಕೆ ಒಂದು ಇಂಚು ಶುಂಠಿ, 4 ಎಸಳು ಬೆಳ್ಳುಳ್ಳಿ, ಸ್ವಲ್ಪ ಹುಳಿ, ನೀರು ಹಾಕಿ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಪನ್ನೀರ್ ತುಂಡುಗಳನ್ನು ಹಾಕಿ ಹುರಿದುಕೊಳ್ಳಿ. ಇದನ್ನು ಒಂದು ಪ್ಲೇಟ್ ಗೆ ಹಾಕಿ ಎತ್ತಿಟ್ಟುಕೊಳ್ಳಿ.
ಅದೇ ಪ್ಯಾನ್ ಗೆ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿದುಕೊಳ್ಳಿ. ಅದಕ್ಕೆ ರುಬ್ಬಿಟ್ಟುಕೊಂಡ ಮಸಾಲಾ ಸೇರಿಸಿ. ನಂತರ ಕರಿಬೇವು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಾದ ನಂತರ ಮೊಸರು ಸೇರಿಸಿ ಕೈಯಾಡಿಸಿ. ಮಸಾಲದಿಂದ ತುಪ್ಪ ಬೇರ್ಪಡುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಪನ್ನೀರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತುಪ್ಪದಲ್ಲಿ ಹುರಿದ ಕರಿಬೇವಿನ ಎಲೆಯಿಂದ ಅಲಂಕರಿಸಿ ಸರ್ವ್ ಮಾಡಿದರೆ ರುಚಿಕರವಾದ ಪನ್ನೀರ್ ಗೀ ರೋಸ್ಟ್ ರೆಡಿ.