ಗೋಧಿ, ತುಪ್ಪ, ಬೆಲ್ಲ ಉಪಯೋಗಿಸಿ ಮಾಡುವ ಚುರ್ಮಾ ಲಡ್ಡು ತಿನ್ನುವುದಕ್ಕೆ ತುಂಬಾ ರುಚಿಕರ ಹಾಗೂ ಆರೋಗ್ಯಕ್ಕೆ ಒಳ್ಳೆಯದು. ಮಾಡುವ ವಿಧಾನ ಕೂಡ ಸುಲಭವಿದೆ.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು – 1 ½ ಕಪ್, (ತುಂಬಾ ನಯವಾದ ಪುಡಿಗಿಂತ ತರಿತರಿ ಆಗಿದ್ದರೆ ಒಳ್ಳೆಯದು), ಕಡಲೆಹಿಟ್ಟು – 1/4 ಕಪ್, ರವೆ – 1/4 ಕಪ್. ಎಣ್ಣೆ – 1 ½ ಟೇಬಲ್ ಸ್ಪೂನ್, ನೀರು – 1/2 ಕಪ್, ತುಪ್ಪ – 1/4 ಕಪ್, ಕರಿಯಲು ಎಣ್ಣೆ – 2 ಕಪ್, ಬೆಲ್ಲ – 1/3 ಕಪ್. ಒಣ ದ್ರಾಕ್ಷಿ – 1 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಒಂದು ದೊಡ್ಡ ಬೌಲ್ ಗೆ ಗೋಧಿಹಿಟ್ಟು, ರವೆ, ಕಡಲೆಹಿಟ್ಟು ಹಾಕಿ ಅದಕ್ಕೆ 1 ½ ಟೇಬಲ್ ಸ್ಪೂನ್ ಎಣ್ಣೆ, ½ ಕಪ್ ಬಿಸಿ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುದ್ದೆ ರೀತಿ ಕಟ್ಟಿಕೊಳ್ಳಿ. ಈ ಮಿಶ್ರಣದಿಂದ ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಕೈಯಲ್ಲಿಯೇ ಒತ್ತಿಕೊಂಡು ಮೊಟ್ಟೆ ಆಕಾರದ ಹಾಗೇ ಉಂಡೆ ಕಟ್ಟಿಕೊಳ್ಳಿ. ಗ್ಯಾಸ್ ಮೇಲೆ ಎಣ್ಣೆ ಕಡಾಯಿ ಇಟ್ಟು ಈ ಉಂಡೆಗಳನ್ನು ಹಾಕಿ ಹೊಂಬಣ್ಣ ಬರುವವರೆಗೆ ಕರಿದು ಒಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಟ್ಟುಬಿಡಿ.
ನಂತರ ಇದನ್ನು ಚಿಕ್ಕ ಪೀಸ್ ರೀತಿ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಂಡು ಒಂದು ಅಗಲವಾದ ಪಾತ್ರೆಗೆ ತೆಗೆದುಕೊಳ್ಳಿ ಇದಕ್ಕೆ ದ್ರಾಕ್ಷಿಯನ್ನು ಸೇರಿಸಿ. ನಂತರ ತುಪ್ಪವನ್ನು ಒಂದು ಪ್ಯಾನ್ ಗೆ ಹಾಕಿಕೊಂಡು ಗ್ಯಾಸ್ ಮೇಲೆ ಇಟ್ಟು ಅದು ಬಿಸಿಯಾಗುತ್ತಲೇ ಬೆಲ್ಲ ಸೇರಿಸಿ.
ಇದು ಕುದಿಯುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ಈ ಮಿಶ್ರಣವನ್ನು ಮಾಡಿಟ್ಟುಕೊಂಡ ಚುರ್ಮಾ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ಕಟ್ಟಿದರೆ ರುಚಿಕರವಾದ ಚುರ್ಮಾ ಲಡ್ಡು ಸವಿಯಲು ಸಿದ್ಧ.