ಹಬ್ಬ ಹರಿದಿನಗಳು ಬಂದಾಗ, ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಏನಾದರೊಂದು ಪಾಯಸ ಮಾಡುತ್ತೇವೆ. ಸ್ವಲ್ಪ ಸ್ಪೆಷಲ್ ಆಗಿ ಈ ಖರ್ಜೂರದ ಪಾಯಸ ಮಾಡಿ ಸವಿದು ನೋಡಿ. ಇದು ತುಂಬಾನೇ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಬೀಜ ತೆಗೆದು ಚಿಕ್ಕದ್ದಾಗಿ ಕತ್ತರಿಸಿಕೊಂಡ ಖರ್ಜೂರ – 2 ಕಪ್, ರವೆ – 2 ಟೇಬಲ್ ಸ್ಪೂನ್, ತೆಂಗಿನಕಾಯಿ ಹಾಲು – 3/4 ಕಪ್, ತುಪ್ಪ – 2 ಟೀ ಸ್ಪೂನ್, ಗೋಡಂಬಿ – 3 ರಿಂದ 4, ಏಲಕ್ಕಿ ಪುಡಿ – ಚಿಟಿಕೆ.
ಮಾಡುವ ವಿಧಾನ:
ಕತ್ತರಿಸಿದ ಖರ್ಜೂರವನ್ನು ಒಂದು ಪಾತ್ರೆಗೆ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ನಂತರ ಗೋಡಂಬಿ ಚೂರು ಹಾಕಿ ಫ್ರೈ ಮಾಡಿ.
ಹಾಗೇ ರವೆ ಕೂಡ ಸೇರಿಸಿ ಪರಿಮಳ ಬರುವವರೆಗೆ ಹುರಿಯಿರಿ. ಇದಕ್ಕೆ 1 ½ ಕಪ್ ನಷ್ಟು ಬಿಸಿ ನೀರು ಹಾಕಿ ರವೆಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಇದಕ್ಕೆ ರುಬ್ಬಿಟ್ಟುಕೊಂಡ ಖರ್ಜೂರದ ಮಿಶ್ರಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ಕೊನೆಗೆ ತೆಂಗಿನಕಾಯಿ ಹಾಲು ಹಾಕಿ ಸ್ವಲ್ಪ ಕುದಿ ಬರುವ ತನಕ ಹಾಗೇ ಇಟ್ಟು ನಂತರ ಗ್ಯಾಸ್ ಆಫ್ ಮಾಡಿ.