ಕಾಬೂಲ್ ಕಡಲೆಯಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದನ್ನು ಬೇಯಿಸಿಕೊಂಡು ಕೂಡ ತಿನ್ನಬಹುದು ಹಾಗೇ ಸಾಂಬಾರು ಮಾಡಿಕೊಂಡು ಕೂಡ ತಿನ್ನಬಹುದು. ಸುಲಭವಾಗಿ ಕಾಬೂಲ್ ಕಡಲೆಕಾಳಿನ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. ಇದು ಅನ್ನ, ಪೂರಿ, ಚಪಾತಿ ಜತೆ ತಿನ್ನಲು ಚೆನ್ನಾಗಿರುತ್ತದೆ.
ಬೇಕಾಗುವ ಸಾಮಾಗ್ರಿ-1 ಕಪ್ ಕಾಬೂಲ್ ಕಡಲೆಕಾಳು, 2 ಟೊಮೆಟೊ, 2 ಹದ ಗಾತ್ರದ ಈರುಳ್ಳಿ, 1 ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪಲಾವ್ ಎಲೆ-1, ಏಲಕ್ಕಿ-1, ಖಾರದ ಪುಡಿ-2 ಚಮಚ, ಗರಂ ಮಸಾಲ-1/2 ಚಮಚ, ಧನಿಯಾ ಪುಡಿ-1 ಚಮಚ. ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ ಮೊದಲಿಗೆ ಒಂದು ಕುಕ್ಕರ್ ನಲ್ಲಿ ಕಡಲೆಕಾಳು ಹಾಕಿ ಅದಕ್ಕೆ 2 ಕಪ್ ನೀರು ಹಾಕಿ ಬೇಯಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಅದಕ್ಕೆ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಹಾಕಿ ಬೇಯಿಸಿಕೊಳ್ಳಿ. ಟೊಮೆಟೊ ಮೆತ್ತಗಾಗಲಿ. ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನೀರು ಸೇರಿಸದೆ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಮೇಲೆ ಪಲಾವ್ ಎಲೆ, ಏಲಕ್ಕಿ ಈರುಳ್ಳಿ, ಹಸಿಮೆಣಸು ಹಾಕಿ ಈರುಳ್ಳಿ ಕೆಂಪಗಾಗುವವರೆಗೆ ಹುರಿದುಕೊಳ್ಳಿ.
ಆಮೇಲೆ ರುಬ್ಬಿಕೊಂಡ ಮಿಶ್ರಣ ಹಾಕಿ. ನೀರು ಸೇರಿಸಬೇಡಿ. ಇದರ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ ಆಮೇಲೆ ಧನಿಯಾ ಪುಡಿ, ಖಾರದಪುಡಿ, ಗರಂ ಮಸಾಲ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಯಿಸಿಕೊಂಡ ಕಡಲೆಕಾಳು ಹಾಕಿ ಚೆನ್ನಾಗಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಕಡಲೇಕಾಳು ಸಾಂಬಾರು ರೆಡಿ.