ತರಕಾರಿ ಕೂಟು, ಸಾಂಬಾರು ಹೀಗೆ ವಿವಿಧ ಬಗೆಯ ಅಡುಗೆ ಮಾಡುತ್ತಿರುತ್ತೇವೆ. ಒಮ್ಮೆ ಮನೆಯಲ್ಲಿ ಆವಿಯಲ್ ಅನ್ನು ಟ್ರೈ ಮಾಡಿ ನೋಡಿ. 4ರಿಂದ 5 ಬಗೆಯ ತರಕಾರಿ ಇದ್ದರೆ ಥಟ್ಟಂತ ಆಗುತ್ತೆ ಈ ಆವಿಯಲ್. ಜತೆಗೆ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಬಿಸಿಬಿಸಿ ಅನ್ನವಿದ್ದರೆ ಹೊಟ್ಟೆಗೆ ಸೇರಿದ್ದೇ ತಿಳಿಯೋದಿಲ್ಲ.
2ಕಪ್ ಕೆ.ಜಿಯಷ್ಟು ತರಕಾರಿ (ಆಲೂಗಡ್ಡೆ, ಬಾಳೆಕಾಯಿ, ನುಗ್ಗೆಕಾಯಿ, ಪಡವಲಕಾಯಿ, ಕ್ಯಾರೆಟ್, ಬೀನ್ಸ್) ಅರಿಶಿನ ಪುಡಿ-1/2 ಟೀ ಸ್ಪೂನ್, ದಪ್ಪ ಮೊಸರು-1/4 ಕಪ್, ಉಪ್ಪು ರುಚಿಗೆ ತಕ್ಕಷ್ಟು. ಇನ್ನು ಮಸಾಲೆಗೆ ½ ಕಪ್ ತೆಂಗಿನಕಾಯಿ ತುರಿ, ಜೀರಿಗೆ-1/2 ಟೀ ಸ್ಪೂನ್, ಹಸಿಮೆಣಸು-1, ತೆಂಗಿನೆಣ್ಣೆ-1.5 ಟೀ ಸ್ಪೂನ್, ಕರಿಬೇವು-ಸ್ವಲ್ಪ.
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಯಲು ಬಿಡಿ. ಅದಕ್ಕೆ ಕತ್ತರಿಸಿಟ್ಟುಕೊಂಡ ತರಕಾರಿ, ಉಪ್ಪು, ಅರಿಶಿನ ಹಾಕಿ ಬೇಯಲು ಬಿಡಿ. ಹದವಾಗಿ ಬೆಂದ ನಂತರ ಅದರ ನೀರನ್ನು ಬಸಿದು ಇಟ್ಟುಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಜೀರಿಗೆ, ಹಸಿಮೆಣಸು ಹಾಕಿ ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ .
ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಬೇಯಿಸಿಟ್ಟುಕೊಂಡ ತರಕಾರಿ, ರುಬ್ಬಿಕೊಂಡ ಮಸಾಲೆ, ಸ್ವಲ್ಪ ನೀರು ಹಾಕಿ 5 ನಿಮಿಷ ಬಿಸಿ ಮಾಡಿಕೊಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಒಂದು ಒಗ್ಗರಣೆ ಪಾತ್ರೆಗೆ ತೆಂಗಿನೆಣ್ಣೆ ಹಾಕಿ ಅದು ಬಿಸಿಯಾದಾಗ ಸಾಸಿವೆ, ಕರಿಬೇವು ಹಾಕಿ. ಈ ಒಗ್ಗರಣೆಯನ್ನು ತರಕಾರಿ ಮಿಶ್ರಣಕ್ಕೆ ಹಾಕಿ. ನಂತರ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ಆವಿಯಲ್ ಸವಿಯಲು ಸಿದ್ಧ.