ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿಯಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಭ್ ಪಂತ್ ಇನ್ನೆರಡು ವಾರಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಲಿಗಾಮೆಂಟ್‌ಗಳು ಸ್ವಾಭಾವಿಕವಾಗಿ ವಾಸಿಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಪಂತ್ ಅವರನ್ನು ಆಬ್ಸರ್ವೇಶನ್‌ನಲ್ಲಿ ಇರಿಸಲಾಗಿದೆ. ಲಿಗಾಮೆಂಟ್‌ಗಳು ಗುಣಮುಖವಾದ ನಂತರ ಆಸ್ಪತ್ರೆಯಿಂದ ಪಂತ್ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
ಇನ್ನೆರಡು ತಿಂಗಳ ನಂತರ ಮತ್ತೊಮ್ಮೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಚಿಕಿತ್ಸೆ ಸಂಪೂರ್ಣ ಮುಗಿದ ಬಳಿಕ ನಾಲ್ಕರಿಂದ ಆರು ವಾರಗಳಲ್ಲಿ ರಿಷಭ್ ಪಂತ್ ಕ್ರಿಕೆಟ್ ಆಡಲು ಪ್ರಾರಂಭಿಸಬಹುದು. ಪಂತ್‌ಗೆ ಎಂಸಿಎಲ್ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದು ವೈದ್ಯರು ಹೇಳಿದ್ದಾರೆ. ಚೇತರಿಕೆಯ ಹಾದಿ ತುಂಬಾ ಕಠಿಣವಾಗಿರುತ್ತದೆ ಎಂಬುದನ್ನೂ ಪಂತ್ ಅರ್ಥಮಾಡಿಕೊಂಡಿದ್ದಾರಂತೆ.
ಲಿಗಾಮೆಂಟ್‌ಗಳು ಸಾಮಾನ್ಯವಾಗಿ ನಾಲ್ಕರಿಂದ ಆರು ವಾರಗಳಲ್ಲಿ ಗುಣವಾಗುತ್ತವೆ. ನಂತರ ಬಲಪಡಿಸುವಿಕೆ ಪ್ರಾರಂಭವಾಗುತ್ತದೆ. ಇನ್ನೆರಡು ತಿಂಗಳಲ್ಲಿ ರಿಷಭ್ ಮತ್ತೆ ಕ್ರಿಕೆಟ್‌ಗೆ ಮರಳಬಹುದೋ ಅಥವಾ ಬೇಡವೋ ಎಂಬುದನ್ನು ಸಹ ಮೌಲ್ಯಮಾಪನ ಮಾಡಲಾಗುತ್ತದೆ. ಅವರು ಕೌನ್ಸೆಲಿಂಗ್ ಸೆಷನ್‌ಗಳಿಗೂ ಒಳಗಾಗಬೇಕಾಗುತ್ತದೆ.
ಇವೆಲ್ಲವೂ ಮುಗಿದು ಮತ್ತೆ ಪಂತ್ ಮೈದಾನಕ್ಕಿಳಿಯಲು ನಾಲ್ಕರಿಂದ ಆರು ತಿಂಗಳಾಗಬಹುದು ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ. 25 ವರ್ಷದ ಪಂತ್, ದೆಹಲಿಯಿಂದ ತನ್ನ ತವರು ರೂರ್ಕಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದರು. NH-58ನಲ್ಲಿ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಡಿಸೆಂಬರ್ 30 ರಂದು ನಡೆದ ಅಪಘಾತ ಇದು. ಜನವರಿ 4 ರಂದು ಡೆಹ್ರಾಡೂನ್‌ನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ, ಪಂತ್‌ರನ್ನು ಮುಂಬೈಗೆ ಸ್ಥಳಾಂತರಿಸಲಾಯಿತು. 2017ರ ಫೆಬ್ರವರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಂತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಕೆಟ್ ಕೀಪರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.