ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರ ಹಿರಿಯ ಪುತ್ರ ಆಕಾಶ್ ಅಂಬಾನಿ ಈಗ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ನ ಅಧ್ಯಕ್ಷರಾಗಲಿದ್ದಾರೆ. ಜೂನ್ 27ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಇದಕ್ಕೂ ಮೊದಲು, ಆಕಾಶ್ ಅಂಬಾನಿ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಂಗಳವಾರ ಷೇರುಪೇಟೆಯಲ್ಲಿ ಕಂಪನಿ ಸಲ್ಲಿಸಿದ ದಾಖಲೆಯಲ್ಲಿ ಇದು ಬಹಿರಂಗವಾಗಿದೆ.
ಬ್ರೌನ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಪದವೀಧರರಾಗಿರುವ ಆಕಾಶ್ ಅಂಬಾನಿ ಮೊದಲು, ಅವರ ತಂದೆ ಮುಖೇಶ್ ಅಂಬಾನಿ ಪರವಾಗಿ ಕಂಪನಿಯ ವಹಿವಾಟು ನಿರ್ವಹಿಸುತ್ತಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮುಕೇಶ್ ಅಂಬಾನಿ ನೀಡಿದ ರಾಜೀನಾಮೆಯನ್ನೂ ಮಂಡಳಿ ಅಂಗೀಕರಿಸಿದೆ. ಈ ನೇಮಕವು ಹೊಸ ಪೀಳಿಗೆಗೆ ನಾಯಕತ್ವವನ್ನು ಹಸ್ತಾಂತರಿಸುತ್ತಿದೆ. ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ನ ಅಧ್ಯಕ್ಷರಾಗಿ ಮುಕೇಶ್ ಅಂಬಾನಿ ಮುಂದುವರಿಯಲಿದ್ದಾರೆ.
ಆಕಾಶ್ ಅಂಬಾನಿ ಜಿಯೋದ 4ಜಿ ವ್ಯವಸ್ಥೆಯನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 2020 ರಲ್ಲಿ, ಪ್ರಪಂಚದಾದ್ಯಂತದ ದೊಡ್ಡ ತಂತ್ರಜ್ಞಾನ ಕಂಪನಿಗಳು ಜಿಯೋದಲ್ಲಿ ಹೂಡಿಕೆ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು. ಆಕಾಶ್ ಸಹ ಭಾರತಕ್ಕೆ ಜಾಗತಿಕ ಹೂಡಿಕೆಯನ್ನು ತರಲು ಶ್ರಮಿಸಿದ್ದರು.
ಮತ್ತೊಂದು ಪ್ರಮುಖ ಬದಲಾವಣೆಯಲ್ಲಿ, ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಮುಂದಿನ 5 ವರ್ಷಗಳ ಕಾಲ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಪಂಕಜ್ ಪವಾರ್ ಅವರನ್ನು ನೇಮಿಸಿದೆ. ಹೆಚ್ಚುವರಿ ನಿರ್ದೇಶಕರಾದ ರಮೀಂದರ್ ಸಿಂಗ್ ಗುಜ್ರಾಲ್ ಮತ್ತು ಕೆ.ವಿ. ಚೌಧರಿ ಈಗ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ನೇಮಕಾತಿಯೂ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಷೇರುದಾರರ ಅನುಮೋದನೆಯ ನಂತರವೇ ಈ ನೇಮಕಾತಿಗಳು ಮಾನ್ಯವಾಗಿರುತ್ತವೆ.