ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಂದು(ಫೆಬ್ರವರಿ 27) ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು. ಉತ್ತರ ಪ್ರದೇಶದ ಬಸ್ತಿಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮೇಲೆ ಸ್ಪಷ್ಟವಾದ ವಾಗ್ದಾಳಿ ನಡೆಸಿದ್ದಾರೆ.
ಸಮಾಜವಾದಿ ಪಕ್ಷವನ್ನು ಗುರಿಯಾಗಿಸಿಕೊಂಡು, ‘ರಾಷ್ಟ್ರ ಭಕ್ತಿ’ ಮತ್ತು ‘ಪರಿವಾರ ಭಕ್ತಿ’ ನಡುವೆ ವ್ಯತ್ಯಾಸವಿದೆ. ಈ ರಾಜವಂಶಸ್ಥರ ನೇತೃತ್ವದ, ಹಿಂದಿನ ಸರ್ಕಾರಗಳು ತಮ್ಮ ರಕ್ಷಣೆ ಮತ್ತು ಅಗತ್ಯತೆಗಳಿಗಾಗಿ, ಭಾರತವನ್ನು ಇನ್ನಿತರ ರಾಷ್ಟ್ರಗಳ ಮೇಲೆ ಅವಲಂಭಿತಗೊಳಿಸಿದ್ದವು. ಆದರೆ ಈಗ ಭಾರತ ‘ಆತ್ಮ ನಿರ್ಭರ’ವಾಗುವತ್ತ ಸಾಗುತ್ತಿದೆ. ನಮ್ಮ ಸರ್ಕಾರ ಸ್ವಾವಲಂಭಿ ಭಾರತಕ್ಕೆ ಆದ್ಯತೆ ನೀಡಿದೆ ಎಂದಿದ್ದಾರೆ.
ಜಾತಿ ಮತ್ತು ಧರ್ಮದ ಅಡೆತಡೆಗಳನ್ನು ಮೀರಿ ದೇಶವನ್ನು ಆತ್ಮನಿರ್ಭರ ಮಾಡುವ ಮೂಲಕ, ಭಾರತವನ್ನು ಬಲಪಡಿಸುವ ಸಮಯ ಬಂದಿದೆ ಎಂದು ಮೋದಿ ಕರೆಕೊಟ್ಟರು. ಈ ಪರಿವಾರವಾದಿಗಳು ದಶಕಗಳ ಕಾಲ ಭಾರತೀಯ ಸೈನ್ಯವನ್ನು ಇತರ ದೇಶಗಳ ಮೇಲೆ ಅವಲಂಭಿತರಾಗಿರುವಂತೆ ಮಾಡಿ, ಭಾರತದ ರಕ್ಷಣಾ ವಲಯವನ್ನು ಹಾಳುಗೆಡವಿದ್ದರು. ಆದರೆ ಈಗ ಉತ್ತರಪ್ರದೇಶದಲ್ಲಿ ನಮ್ಮದೇ ಡಿಫೆನ್ಸ್ ಕಾರಿಡಾರ್ ಸ್ಥಾಪನೆಯಾಗಿದೆ ಎಂದರು.
ಈ ವೇಳೆ ಬಾಲಾಕೋಟ್ ವೈಮಾನಿಕ ದಾಳಿಗೆ ಪುರಾವೆ ಕೇಳುವ ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧ, ಮೋದಿ ವಾಗ್ದಾಳಿ ನಡೆಸಿದರು. ಫೆಬ್ರವರಿ 26 ರಂದು ದೇಶವು ಬಾಲಾಕೋಟ್ ವೈಮಾನಿಕ ದಾಳಿಯ ಮೂರು ವರ್ಷಗಳನ್ನು ಆಚರಿಸಿದೆ. ಆದರೆ ರಾಜವಂಶಸ್ಥರು ಹಾಗೂ ವಿರೋಧ ಪಕ್ಷಗಳು ಅದಕ್ಕೆ ಪುರಾವೆಗಳನ್ನ ಕೇಳಿದ್ದವು ಎಂದು ಆಕ್ರೋಶ ವ್ಯಕ್ತಪಡಿಸಿದರು.