ಕೋವಿಡ್ ಸಾಂಕ್ರಾಮಿಕ ಎರಡು ವರ್ಷಗಳ ಕಾಲ ಇಡೀ ಜಗತ್ತನ್ನೇ ನಡುಗಿಸಿಬಿಟ್ಟಿತ್ತು. ಆದ್ರೀಗ ಕೊರೊನಾಗಿಂತಲೂ ದೊಡ್ಡ ಸಮಸ್ಯೆ ಭಾರತವನ್ನು ಕಾಡ್ತಾ ಇದೆ. ಅದೇ ವಾಯು ಮಾಲಿನ್ಯ. ಡಿಸೆಂಬರ್ 2ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗ್ತಿದೆ. ಭೋಪಾಲ್ ಅನಿಲ ದುರಂತದಲ್ಲಿ ಸಂತ್ರಸ್ತರ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಘಟನೆ ನಡೆದು 38 ವರ್ಷಗಳು ಕಳೆದಿವೆ, ಆದರೆ ಇಂದಿಗೂ ಭಾರತದಲ್ಲಿ ವಿಷಪೂರಿತ ಕಲುಷಿತ ಗಾಳಿಯಿಂದ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಿದ್ದಾರೆ.
ಪ್ರತಿ ವರ್ಷ 24 ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಮಾಲಿನ್ಯವೇ ಕಾರಣವಾಗ್ತಿದೆ. 9 ಲಕ್ಷಕ್ಕೂ ಹೆಚ್ಚು ಜನರು ವಾಯು ಮಾಲಿನ್ಯದಿಂದಲೇ ಸಾವನ್ನಪ್ಪುತ್ತಿದ್ದಾರೆ. ಇಡೀ ಜಗತ್ತಿನಲ್ಲಿ ವಾರ್ಷಿಕ ಸುಮಾರು 90 ಲಕ್ಷ ಮಂದಿ ಮಾಲಿನ್ಯಕ್ಕೆ ಬಲಿಯಾಗುತ್ತಿದ್ದಾರೆ. ಜಗತ್ತಿನಲ್ಲಿ ಮಾಲಿನ್ಯದಿಂದ ಸಾಯುವ ಪ್ರತಿ 10 ಜನರಲ್ಲಿ ಮೂರನೇ ವ್ಯಕ್ತಿ ಭಾರತೀಯನಾಗಿದ್ದು, ಮಾಲಿನ್ಯವು ಪ್ರತಿದಿನ 6, 575 ಭಾರತೀಯರ ಜೀವವನ್ನು ತೆಗೆಯುತ್ತಿದೆ. ಮಾಲಿನ್ಯವು ಮಾನವ ನಾಗರಿಕತೆಯನ್ನು ಹಾಳು ಮಾಡುವುದಲ್ಲದೆ ದೇಶದ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತಿದೆ.
ವರ್ಲ್ಡ್ ಎಕನಾಮಿಕ್ ಫೋರಂನ ವರದಿಯ ಪ್ರಕಾರ, ಮಾಲಿನ್ಯದಿಂದಾಗಿ ಭಾರತವು ಪ್ರತಿ ವರ್ಷ 7 ಲಕ್ಷ ಕೋಟಿಗೂ ಹೆಚ್ಚು ನಷ್ಟವನ್ನು ಅನುಭವಿಸುತ್ತಿದೆ. ಅಂದರೆ, ಭಾರತೀಯ ಆರ್ಥಿಕತೆಯು ಪ್ರತಿದಿನ 2 ಸಾವಿರ ಕೋಟಿಗೂ ಹೆಚ್ಚು ನಷ್ಟವನ್ನು ಅನುಭವಿಸುತ್ತಿದೆ. ಪ್ರತಿ ವರ್ಷ 7 ಲಕ್ಷ ಕೋಟಿ ಅಂದರೆ ಭಾರತದ ಆರ್ಥಿಕತೆಯ ಸುಮಾರು 3 ಪ್ರತಿಶತದಷ್ಟು ಮಾಲಿನ್ಯದ ಕಾರಣಕ್ಕೆ ನಾಶವಾಗುತ್ತಿದೆ. ರಾಜಧಾನಿ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಮತ್ತು ಮಹಾನಗರ ಎಂಬ ಕುಖ್ಯಾತಿ ಗಳಿಸಿದೆ. ದೆಹಲಿ, ಮುಂಬೈ ಮತ್ತು ಕೊಲ್ಕತ್ತಾ ವಿಶ್ವದ ಅಗ್ರ 20 ಕಲುಷಿತ ನಗರಗಳಲ್ಲಿ ಸೇರಿವೆ.