ಬೆಂಗಳೂರು : ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 29 ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದ್ದು, ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಕೂಡ ತಮ್ಮ ಸಾಧನೆಗೆ ಗೌರವ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಸಾಧನೆಗೈದ ಮಕ್ಕಳನ್ನು ಕೊಂಡಾಡಿದರು. ಸಾಹಸ, ಕಲೆ, ಕ್ರೀಡೆ, ಶಾಲೆಯ ಸಾಧನೆ, ಸಂಸ್ಕತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದೇಶದಲ್ಲಿನ 29 ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.
ರಾಜ್ಯದ ಅದರಲ್ಲಿಯೂ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಈ ಪ್ರಶಸ್ತಿ ಪಡೆದಿದ್ದಾರೆ. ಮನೋರಂಜನಾ ಹಾಗೂ ಸಂಗೀತ ಕ್ಷೇತ್ರದಲ್ಲಿ ಸೈಯದ್ ಫತ್ತಿನ್ ಅಹಮದ್ ಹಾಗೂ ಸಮಾಜ ಸೇವೆಯಲ್ಲಿ ನವೋದಯ ಶಾಲೆಯ ಅಭಿನವ್ ಚೌಧರಿ ಪ್ರಶಸ್ತಿ ಪಡೆದಿದ್ದಾರೆ.
ಈ ವರ್ಚುವಲ್ ಕಾರ್ಯಕ್ರಮದಲ್ಲಿ ಬೆಂಗಳೂರಿನ ಜಿಲ್ಲಾಧಿಕಾರಿ ಮಂಜುನಾಥ್ ಕೂಡ ಭಾಗಿಯಾಗಿದ್ದರು. ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಪ್ರಥಮ ಬಾರಿಗೆ ಬ್ಲಾಕ್ ಚೈನ್ ತಂತ್ರಜ್ಞಾನದ ಡಿಜಿಟಲ್ ಸರ್ಟಿಫಿಕೆಟ್ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ರಾಷ್ಟ್ರೀಯ ಪುರಸ್ಕಾರಕ್ಕೆ ರಾಷ್ಟ್ರೀಯ ಬಾಲ ಪುರಸ್ಕಾರ ಎಂದು ನೂತನವಾಗಿ ಹೆಸರಿಟ್ಟಿದ್ದಾರೆ.
ಅಭಿನವ್ ಚೌಧರಿ 12ನೇ ತರಗತಿಯಲ್ಲಿ ಓದುತ್ತಿದ್ದರೂ ಚಿಕ್ಕ ವಯಸ್ಸಿನಲ್ಲಿ ಸಂಸ್ಥೆ ಕಟ್ಟಿ ಸಮಾಜ ಸೇವೆಯಲ್ಲಿ ಭಾಗಿಯಾಗಿದ್ದ. ಕ್ರೂಸ್ ಎನ್ನುವ ಸಂಸ್ಥೆ ಕಟ್ಟಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದ. ಈ ಸಾಧನೆಗಾಗಿ ಈ ವಿದ್ಯಾರ್ಥಿಗೆ ಪುರಸ್ಕಾರ ಲಭಿಸಿದೆ.
ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿನವ್ ಹಳೆಯ ಪುಸ್ತಕಗಳನ್ನು ತೆಗೆದುಕೊಳ್ಳಲು ಹಾಗೂ ಮಾರಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದ.
ಸಂಗೀತ ವಿಭಾಗದಲ್ಲಿ ಪ್ರಶಸ್ತಿ ಪಡೆದಿರುವ ಸೈಯದ್ ತನ್ನ 3ನೇ ವರ್ಷದಿಂದಲೇ ಪಿಯಾನೋ ನುಡಿಸುತ್ತಿದ್ದ. ಅಲ್ಲದೇ ಲಂಡನ್ ವಿಶ್ವ ವಿದ್ಯಾಲಯದಿಂದ ಅತೀ ಕಡಿಮೆ ವಯಸ್ಸಿನಲ್ಲಿಯೇ ಸಂಗೀತ ಪದವಿ ಪಡೆದ ವಿದ್ಯಾರ್ಥಿಯಾಗಿದ್ದಾನೆ. ಈ ವಿದ್ಯಾರ್ಥಿ 14 ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾನೆ.