ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜಾರ್ಖಂಡ್ ಮಾಜಿ ರಾಜ್ಯಪಾಲೆ, ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಅವರು ಈಗಾಗಲೇ ತಮ್ಮ ನಾಮಪತ್ರ ಸಲ್ಲಿಸಿದ್ದು, ಎನ್ ಡಿ ಎ ಮೈತ್ರಿಕೂಟಕ್ಕೆ ಬಹುಮತವಿರುವ ಕಾರಣ ಅವರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗಿದೆ.
ಇದರ ಮಧ್ಯೆ ದ್ರೌಪದಿ ಮುರ್ಮು ಅವರು ಹುಟ್ಟಿ ಬೆಳೆದ ಊರು ಡೊಂಗ್ರಿಶಾಯಿ ವಿಭಿನ್ನ ಕಾರಣವೊಂದಕ್ಕೆ ಸುದ್ದಿಯಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಈ ಕುಗ್ರಾಮಕ್ಕೆ ಈವರೆಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲವೆಂದರೆ ನೀವು ನಂಬಲೇಬೇಕು. ಈ ಊರಿನಲ್ಲಿ ಇಂದಿಗೂ ಮೂಲ ಸೌಕರ್ಯಗಳ ಕೊರತೆ ಇದ್ದು, ಕಚ್ಚಾ ರಸ್ತೆಗಳನ್ನು ಹೊಂದಿದೆ.
ಈ ಊರಿನ ವಿದ್ಯಾರ್ಥಿಗಳು ತಮ್ಮ ಓದು ಬರಹಕ್ಕೆ ಸೀಮೆಎಣ್ಣೆ ದೀಪವನ್ನು ಬಳಸುತ್ತಿದ್ದು, ಮೊಬೈಲ್ ಹೊಂದಿರುವವರು ಪಕ್ಕದ ಪಟ್ಟಣದಲ್ಲಿ ಚಾರ್ಜ್ ಮಾಡಿಕೊಳ್ಳಬೇಕಿದೆ. ದ್ರೌಪದಿ ಮುರ್ಮು ಈ ಮೊದಲೇ ಸಚಿವೆ, ರಾಜ್ಯಪಾಲರಾಗಿದ್ದರೂ ಸಹ ಗ್ರಾಮದ ಅಭಿವೃದ್ಧಿಯನ್ನು ಮರೆತಿದ್ದರು ಎಂಬುದು ಅಲ್ಲಿನವರ ದೂರಾಗಿದೆ. ಇದೀಗ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಗ್ರಾಮಕ್ಕೆ ಅದೃಷ್ಟ ಖುಲಾಯಿಸಿದ್ದು ರಾತ್ರೋರಾತ್ರಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಹಾಗೂ ರಸ್ತೆಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ.