ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನಲ್ಲಿರುವ ಬಂಕಾಪುರ ನವಿಲುಧಾಮ ರಾಷ್ಟ್ರಪಕ್ಷಿಗಳ ನೆಲೆಯಾಗಿದೆ. ಜಿಲ್ಲಾ ಕೇಂದ್ರ ಹಾವೇರಿಯಿಂದ 22 ಕಿಲೋ ಮೀಟರ್ ಹಾಗೂ ತಾಲ್ಲೂಕು ಕೇಂದ್ರದಿಂದ 12 ಕಿಲೋ ಮೀಟರ್ ದೂರದಲ್ಲಿದೆ.
ನವಿಲನ್ನು 1963ರಲ್ಲಿ ರಾಷ್ಟ್ರಪಕ್ಷಿ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತು. ಆನಂತರದಲ್ಲಿ 1972ರ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಈ ನವಿಲುಧಾಮ ಅಸ್ತಿತ್ವಕ್ಕೆ ಬಂದಿತು. ಕೇಂದ್ರ ಸರ್ಕಾರ 2001ರಲ್ಲಿ ಅಧಿಕೃತವಾಗಿ ನವಿಲುಧಾಮ ಘೋಷಣೆ ಮಾಡಿತು. ದೇಶದಲ್ಲಿ ಎರಡು ನವಿಲುಧಾಮಗಳಿದ್ದು, ಒಂದು ಹರಿಯಾಣದಲ್ಲಿ, ಮತ್ತೊಂದು ಬಂಕಾಪುರದಲ್ಲಿದೆ. ನವಿಲುಗಳ ರಕ್ಷಣೆಗೆ ನಿರ್ಮಿಸಿದ ರಕ್ಷಿತ ಪ್ರದೇಶ ಇದಾಗಿದ್ದು, ಬಂಕಾಪುರ ಕೋಟೆ ವ್ಯಾಪ್ತಿಗೆ ಸೇರಿದ 139 ಎಕರೆ ಪ್ರದೇಶದಲ್ಲಿ ಈ ನವಿಲುಧಾಮ ಇದೆ.
ಕೋಟೆಯ ಸುತ್ತ ಕಂದಕ ಇದ್ದು, ಜಾಲಿ, ಹಿಪ್ಪೆ ಮರಗಳು ಹೆಚ್ಚಾಗಿದೆ. ನವಿಲು ಸಂತಾನ ಅಭಿವೃದ್ಧಿ ಮತ್ತು ವಿಶ್ರಾಂತಿಗೆ ಪ್ರಶಸ್ತವಾಗಿದೆ. ನವಿಲು ಸಂರಕ್ಷಣೆ, ಸಂತಾನಾಭಿವೃದ್ಧಿ ಕೇಂದ್ರವೆಂದು ಗುರುತಿಸಲ್ಪಟ್ಟಿದ್ದು, ಐತಿಹಾಸಿಕ ನಗರೇಶ್ವರ ದೇವಾಲಯ ಇಲ್ಲಿದೆ. ನವಿಲು ಮಾತ್ರವಲ್ಲದೇ, ಮಿಂಚುಳ್ಳಿ, ಮರಕುಟಿಕ, ದರ್ಜಿ ಹಕ್ಕಿ, ನೈಟ್ ಜಾರ್ ಸೇರಿದಂತೆ ಹಲವು ರೀತಿಯ ಪಕ್ಷಿಗಳು ಇಲ್ಲಿದೆ.